ನವದೆಹಲಿ, ಮೇ 25 (DaijiworldNews/PY) : ಕೊರೊನಾ ಸೋಂಕಿಗೆ ಸಂಬಂಧಪಟ್ಟಂತೆ ಭಾರತದಲ್ಲಿ ಅಭಿವೃದ್ದಿಪಡಿಲಾಗಿರುವ 14 ವ್ಯಾಕ್ಸಿನ್ ಕ್ಯಾಂಡಿಡೇಟ್ಸ್ನಲ್ಲಿ ನಾಲ್ಕು ಲಸಿಕೆಯು ಮೂರರಿಂದ ಐದು ತಿಂಗಳ ಒಳಗೆ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.
ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರೊಂದಿಗೆ ನಡೆದ ಆನ್ಲೈನ್ ಸಂವಾದದಲ್ಲಿ ಮಾತನಾಡಿದ ಹರ್ಷ ವರ್ಧನ್, ಭಾರತವೂ ಕೂಡಾ ಈ ಪ್ರಕ್ರಿಯೆಗೆ ನೆರವು ನೀಡುತ್ತಿದ್ದು, 14 ಸಂಭಾವ್ಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳು ಪ್ರಸ್ತುತ ಪ್ರಿ-ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ಕೊರೊನಾ ಸೋಂಕಿಗೆ ಯಾವಾಗ ಲಸಿಕೆ ದೊರಕುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ವೈದ್ಯನಾಗಿ ಅನುಭವವಿರುವುದರಿಂದ ಕನಿಷ್ಟ ಒಂದು ವರ್ಷವಾಗುತ್ತದೆ ಎಂದು ಹೇಳಬಲ್ಲೆ ಎಂದರು.
ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ವಿಶ್ವವೇ ಲಸಿಕೆ ಅಭಿವೃದ್ದಿಪಡಿಸುವತ್ತ ಸಾಗಿದೆ. ನೂರಕ್ಕೂ ಅಧಿಕ ಲಸಿಕೆಗಳನ್ನು ಅಭಿವೃದ್ದಿಪಡಿಸಲಾಗಿದ್ದು, ಈ ಲಸಿಕೆಗಳು ಬೇರೆ ಬೇರೆ ಹಂತಗಳಲ್ಲಿ ಇವೆ. ಲಸಿಕೆ ಅಭಿವೃದ್ದಿಯು ವಿಶ್ವ ಆರೋಗ್ಯ ಸಂಸ್ಥೆಯ ಸಮನ್ವಯದಲ್ಲಿ ನಡೆದಿದೆ ಎಂದು ತಿಳಿಸಿದರು.