ಬೆಂಗಳೂರು, ಮೇ 26 (DaijiworldNews/PY) : ಪೊಲೀಸ್ ಸಿಬ್ಬಂದಿಗೆ ಮೂಲಸೌಕರ್ಯ ಒದಗಿಸಲು ಆರು ಗಡಿಗಳಲ್ಲಿ ಮೊಬೈಲ್ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಿರಿಯ ಅಧಿಕಾರಿಳೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಗಳಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಿಪ್ಪಾಣಿ, ಧೂಳಖೇಡ, ಕಲಬುರ್ಗಿ, ರಾಯಚೂರು, ವಿಜಯಪುರ ಮತ್ತು ಅತ್ತಿಬೆಲೆಯಲ್ಲಿ ವಿಶ್ರಾಂತಿ ಕೊಠಡಿ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಪಾಳಿ ವ್ಯವಸ್ಥೆ ಮಾಡಬೇಕು. ಅಲ್ಲದೇ, ಸಂಚಾ ನಿಯಂತ್ರಣದಲ್ಲಿ ಕರ್ತವ್ಯ ಮಾಡುತ್ತಿರುವವರಿಗೆ ಮಾಸ್ಕ್, ಕೈಗವಸು, ಹೆಡ್ವೈಪರ್, ಜಾಕೆಟ್ ನೀಡಬೇಕು. ಇದರೊಂದಿಗೆ ಪೊಲೀಸ್ ಠಾಣೆ ಹಾಗೂ ಪೊಲೀಸ್ ಕಾಲೋನಿಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆಗಾಗ ಪ್ಲಿಮಿಗೇಷನ್ ಮಾಡಬೇಕು. ಕೊರೊನಾ ತಪಾಸಣೆಯನ್ನೂ ನಡೆಸಬೇಕು ಎಂದು ಸೂಚನೆ ನೀಡಿದರು.
ಚೆಕ್ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಮನೋಬಲ ಹೆಚ್ಚಿಸಲು ಅಗತ್ಯವಾದ ಕ್ರಮಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.
ಚೆಕ್ಪೋಸ್ಟ್ ಹಾಗೂ ಕಂಟೈನ್ಮೆಂಟ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ಅವರ ಸಂಬಂಧಿಕರಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.