ನವದೆಹಲಿ, ಮೇ 26 (DaijiworldNews/PY) : ದೇಶಾದ್ಯಂತ ಲಾಕ್ಡೌನ್ ಘೋಷಣೆ ಆದಾಗಿನಿಂದಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಪ್ರತಿಯೊಂದರಲ್ಲೂ ತಪ್ಪು ಹುಡುಕುತ್ತಿದ್ದಾರೆ. ಅವರನ್ನು ಲಾಕ್ಡೌನ್ ಮುಗಿಯುವವರೆಗೂ ಕ್ವಾರಂಟೈನ್ ಮಾಡಬೇಕು ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೊರೊನಾದಿಂದಾಗಿ ಆತಂಕವಾಗಿರುವ ಜನರಲ್ಲಿ ಅವರು ಮತ್ತಷ್ಟು ದಿಗಿಲು ಹುಟ್ಟಿಸುತ್ತಿದ್ದಾರೆ. ಇದನ್ನು ತಡೆಯಲು ಗಾಂಧಿ ಕುಟುಂಬದವರನ್ನು ಕ್ವಾರಂಟೈನ್ನಲ್ಲಿಡಬೇಕು. ಈಗ ಲಾಕ್ಡೌನ್ ವಿಫಲವಾಗಿದೆ ಎಂದು ಹೇಳುವ ಮೂಲಕ ಜನರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪವೇಶ್ ವರ್ಮಾ ಅವರ ಈ ಹೇಳಿಕೆ ಕಾಂಗ್ರೆಸ್ ಕೂಡಾ ತಿರುಗೇಟು ನೀಡಿದ್ದು, ವೈಯುಕ್ತಿಕವಾದ ಟೀಕೆಗಳನ್ನು ಮಾಡುವ ಬದಲು, ಯೋಜಿತವಲ್ಲದ ಲಾಕ್ಡೌನ್ನಿಂದ ವಲಸೆ ಕಾರ್ಮಿಕರು ಪಡುತ್ತಿರುವ ತೊಂದರೆಗಳಿಗೆ ಬಿಜೆಪಿ ಉತ್ತರಿಸಲಿ ಎಂದು ಹೇಳಿದೆ.
ಇತ್ತೀಚೆಗೆ ಪರ್ವೇಶ್ ವರ್ಮಾ ಅವರು , ಮುಸ್ಲಿಮರು ನಮಾಜ್ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದದೆಹಲಿ ಪೊಲೀಸರು, ಇದು ತಪ್ಪು, ವದಂತಿ ಹಬ್ಬಿಸುವುದಕ್ಕಾಗಿ ಹಳೆಯ ವಿಡಿಯೋವನ್ನು ಉಪಯೋಗಿಸಲಾಗಿದೆ. ಪೋಸ್ಟ್ ಮಾಡುವು ಮೊದಲು ದೃಢೀಕರಿಸಿ, ವದಂತಿ ಹಬ್ಬಿಸಬೇಡಿ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.