ನವದೆಹಲಿ, ಮೇ 26 (DaijiworldNews/PY) : ದೋಹಾ, ಸ್ಯಾನ್ ಫ್ರಾನ್ಸಿಸ್ಕೊ, ಮೆಲ್ಬೋರ್ನ್ ಹಾಗೂ ಸಿಡ್ನಿಯಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ 800ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಸೋಮವಾರ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2020ರ ಮೇ 25 ರಂದು ದೋಹಾ, ಸ್ಯಾನ್ ಫ್ರಾನ್ಸಿಸ್ಕೊ, ಮೆಲ್ಬೋರ್ನ್ ಮತ್ತು ಸಿಡ್ನಿಯಿಂದ ದೆಹಲಿ, ಗಯಾ, ಕೊಚ್ಚಿನ್ ಹಾಗೂ ಅಹಮದಾಬಾದ್ಗೆ 833 ಭಾರತೀಯ ನಾಗರಿಕರು ನಾಲ್ಕು ವಿಮಾನಗಳಲ್ಲಿ ಮರಳಿದ್ದಾರೆ ಎಂದು ತಿಳಿಸಿದ್ದಾರೆ.
ಈವರೆಗೆ 20 ಸಾವಿರ ಭಾರತೀಯ ನಾಗರಿಕರನ್ನು ವಂದೇ ಮಾತರಂ ಮಿಷನ್ ಅಡಿಯಲ್ಲಿ ದೇಶಕ್ಕೆ ಕರೆತರಲಾಗಿದೆ. ಈ ಸಂಖ್ಯೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಸ್ತಿಯಾಗುತ್ತದೆ ಎಂದು ಕಳೆದ ವಾರ ಅವರು ಹೇಳಿದ್ದರು.
ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಕೇಂದ್ರ ಸರ್ಕಾರವು, ವಿದೇಶದಲ್ಲಿ ಉಳಿದಿದ್ದ ಭಾರತೀಯರನ್ನು ಸ್ಥಳಾಂತರ ಮಾಡಲು ಮೇ 7 ರಂದು ವಂದೇ ಭಾರತ್ ಮಿಷನ್ನ ಮೊದಲ ಹಂತವನ್ನು ಆರಂಭಿಸಿತ್ತು.