ನವದೆಹಲಿ, ಮೇ 26 (Daijiworld News/MSP): ಜೂನ್ ತಿಂಗಳಾಂತ್ಯದವರೆಗೂ ಕಾದು ಪರಿಸ್ಥಿತಿ ನೋಡಿಕೊಂಡು ,ಬಳಿಕ ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಕ್ಷಣ ತಜ್ಞರ ಸಮಿತಿಯೊಂದು ಶಿಫಾರಸ್ಸು ಮಾಡಿದೆ.
ಕೊರೊನಾ ವೈರಸ್ ತಡೆಗೆ ಮುಂಜಾಗೃತ ಕ್ರಮವಾಗಿ ಶಾಲಾ- ಕಾಲೇಜುಗಳನ್ನು ಕೇಂದ್ರ ಸರ್ಕಾರವೂ ಬಂದ್ ಮಾಡಿ ಆದೇಶಿಸಿತ್ತು. ಇದೀಗ ಈ ಸಮಿತಿಯೂ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ವರದಿ ಆಧಾರದ ಮೇರೆಗೆ ಜುಲೈನಿಂದ ಶಾಲೆಗಳನ್ನು ಪ್ರಾರಂಭಿಸುವಂತೆ ಶಿಫಾರಸ್ಸು ಮಾಡಲಾಗಿದೆ. ತಜ್ಞರ ಸಮಿತಿ ವರದಿಯಂತೆ ವಲಯಗಳ ಪ್ರಕಾರ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ.
ಮೊದಲಿಗೆ ಹಸಿರು, ಕಿತ್ತಳೆ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಿ. ನಂತರ ಪರಿಸ್ಥಿತಿ ಸುಧಾರಿಸಿದ ಬಳಿಕ ರೆಡ್ ಝೋನ್ ನಲ್ಲೂ ಶಾಲಾ ಪ್ರಾರಂಭಕ್ಕೆ ಅವಕಾಶ ನೀಡಲಾಗುವುದು. ಆದರೆ ಪುಟಾಣಿ ಮಕ್ಕಳು ಮಾತ್ರ ಮನೆಯಲ್ಲಿಯೇ ಅಧ್ಯಯನ ಮುಂದುವರಿಸಲು ಸೂಚಿಸುವ ಸಾಧ್ಯತೆ ಇದೆ.
ಮಾರ್ಚ್ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಮುಚ್ಚಿ ಕೊರೊನಾ ಹರಡದಂತೆ ಮುಂಜಾಗ್ರತೆಯನ್ನು ಕೇಂದ್ರ ಅನುಸರಿಸಿದೆ.