ಮುಂಬೈ, ಮೇ 26 (DaijiworldNews/PY) : ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಕೊರೊನಾ ವೈರಸ್ ಅನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎನ್ನುವ ಅಂಶವನ್ನು ಪರಿಗಣಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ರಾಜ್ಯಸಭೆ ಬಿಜೆಪಿ ಸಂಸದ ನಾರಾಯಣ್ ರಾಣೆ ಅವರು ರಾಜ್ಯಪಾಲ ಬಿ. ಎಸ್. ಕೋಶಿಯಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅನಾನುಭವಿ. ಸರ್ಕಾರ ನಡೆಸುವ ಸಾಮರ್ಥ್ಯ ಇವರಿಗಿಲ್ಲ. ಅವರಿಗೆ ಆಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಸರಿಯಾಗಿ ನಡೆಸಲು ಸಾಧ್ಯವಿಲ್ಲ. ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಮಧ್ಯಪ್ರದೇಶವನ್ನು ರಾಷ್ಟ್ರಪತಿಗಳ ಆಡಳಿತದಲ್ಲಿಡಬೇಕು ಎಂದು ತಿಳಿಸಿದರು.
ಈ ಸಂದಿಗ್ದ ಪರಿಸ್ಥತಿಯ ಸಂದರ್ಭ ಎನ್ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ನ ಮಹಾ ವಿಕಾಸ್ ಅಘಾಡಿ ಸರ್ಕಾರ ಆಡಳಿತಾತ್ಮಕ ವ್ಯವಹಾರಗಳನ್ನು ಗೊಂದಲಕ್ಕೀಡು ಮಾಡಿದೆ. ರಾಜ್ಯದಲ್ಲಿ ಸ್ಥಳೀಯ ಹಾಗೂ ಸರ್ಕಾರ ಸಂಸ್ಥೆಗಳು ನಡೆಸುತ್ತಿರುವ ಆಸ್ಪತ್ರೆಗಳ ಸ್ಥಿತಿ ಕರುಣಾಜನಕವಾಗಿದೆ. ಈ ಕಾರ್ಯಗಳ ಉಸ್ತುವಾರಿಯನ್ನು ಮಿಲಿಟರಿ ವಹಿಸಿಕೊಳ್ಳಬೇಕು. ಅಲ್ಲದೇ, ಆರೋಗ್ಯ ರಕ್ಷಣೆಯ ಪರಿಸ್ಥಿತಿಯನ್ನು ಸುಧಾರಣೆ ಮಾಡಲೂ ಸಹಾಯ ಮಾಡಬೇಕು ಎಂದರು.
ಇದುವರೆಗೆ ಮಹಾರಾಷ್ಟ್ರದಲ್ಲಿ 52,667 ಸೋಂಕು ಪ್ರಕರಣಗಳು ದಾಖಲಾಗಿದ್ದು, 1,695 ಮಂದಿ ಸಾವನ್ನಪ್ಪಿದ್ದಾರೆ.