ವರಂಗಲ್, ಮೇ 26 (DaijiworldNews/PY) : ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಬಾವಿಯೊಂದರಲ್ಲಿ ಪತ್ತೆಯಾದ ಒಂಭತ್ತು ಮೃತದೇಹಗಳಿಗೆ ಸಂಬಂಧಪಟ್ಟಂತೆ ಮಾಹಿತಿ ದೊರೆತಿದ್ದು, ತನ್ನ ಪ್ರೇಯಸಿಯ ಕೊಲೆಯನ್ನು ಮುಚ್ಚಿ ಹಾಕಲು ಒಂಭತ್ತು ಜನರನ್ನು ಹತ್ಯೆ ಮಾಡಿರುವ ಸತ್ಯಾಂಶ ತನಿಖೆಯ ಸಂದರ್ಭ ಬಯಲಾಗಿದೆ.
ಜಿಲ್ಲೆಯ ಗೊರ್ರೆಕುಂಟಾ ಗ್ರಾಮದಲ್ಲಿ ಮೇ 21 ಹಾಗೂ 22 ರಂದು ಒಂದೇ ಬಾವಿಯಿಂದ 9 ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದು, ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿಲು ಪೊಲೀಸ್ ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಇದೀಗ ಭೇದಿಸಿದ್ದು, ಆರೋಪಿ ಸಂಜಯ್ನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬಿಹಾರ ಮೂಲದ ಸಂಜಯ್ ಕುಮಾರ್ ಯಾದವ್ (30) ಎಂದು ಗುರುತಿಸಲಾಗಿದೆ. ಸಂಜಯ್ ಗೊರ್ರೆಕುಂಟಾನದಲ್ಲಿರುವ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸುಮಾರು ಐದು ವಷಗಳ ಹಿಂದೆ ಮೃತ ಮಕ್ಸೂದ್ ಆಲಂ ಸಂಬಂಧಿ ರಫಿಕಾ ತನ್ನ ಮೂವರು ಮಕ್ಕಳೊಂದಿಗೆ ಮಕ್ಸೂದ್ ಮನೆಗೆ ಬಂದಿದ್ದಳು. ಬಳಿಕ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭ ಆರೋಪಿ ಸಂಜಯ್ ರಫಿಕಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಬಳಿಕ ತನ್ನ ಮೂವರು ಮಕ್ಕಳೊಂದಿಗೆ ರಫಿಕಾ ಸಂಜಯ್ ಮನೆಗೆ ಹೋಗಿದ್ದಾಳೆ ಎಂದು ವಾರಂಗಲ್ ಪೊಲೀಸ್ ಆಯುಕ್ತ ಡಾ.ವಿ.ರವಿಂದ್ರ ತಿಳಿಸಿದ್ದಾರೆ.
ಆರೋಪಿ ಸಂಜಯ್ ಇತ್ತೀಚೆಗೆ ರಫಿಕಾ ಮಗಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದು, ಈ ಕಾರಣದಿಂದ ಕೋಪಗೊಂಡ ಆಕೆ ಸಂಜಯ್ಗೆ ಎಚ್ಚರಿಕೆ ನೀಡಿದ್ದಾಳೆ. ಕೊನೆಗೆ ಆರೋಪಿ ರಫಿಕಾಳನ್ನು ಹತ್ಯೆ ಮಾಡಲು ತೀರ್ಮಾನಿಸಿದ್ದಾನೆ. ಹಾಗೇಯೇ ತಾನು ರಫಿಕಾಳನ್ನು ವಿವಾಹವಾಗುವುದೆಂದು ನಂಬಿಸಿ , ಈ ಬಗ್ಗೆ ತಮ್ಮ ಸಂಬಂಧಿಕರೊಂದಿಗೆ ಮಾತನಾಡುತ್ತೇನೆ ಎಂದು ಮಾ 7 ರಂದು ಆರೋಪಿ ಸಂಜಯ್ ಹಾಗೂ ರಫಿಕಾ ಪಶ್ಚಿಮ ಬಂಗಾಳಕ್ಕೆ ಗರಿಬ್ ರಾಥ್ ರೈಲಿನಲ್ಲಿ ಹೋಗಿದ್ದರು.
ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಸಂದರ್ಭ ಆರೋಪಿ ಸಂಜಯ್ ನಿದ್ದೆ ಮಾತ್ರೆಗಳನ್ನು ಮಜ್ಜಿಗೆಗೆ ಮಿಕ್ಸ್ ಮಾಡಿ ರಫಿಕಾಳಿಗೆ ಕುಡಿಯಲು ಕೊಟ್ಟಿದ್ದಾನೆ. ಮಜ್ಜಿಗೆ ಕುಡಿದ ರಫಿಕಾಗೆ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಆತ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೂಲಕ ಹಾದು ಹೋಗುತ್ತಿರುವ ಸಂದರ್ಭ ರಫಿಕಾಳ ಶವವನ್ನು ಆತ ಹೊರಗೆ ಎಸೆದಿದ್ದಾನೆ. ರೈಲ್ವೆ ಪೊಲೀಸರು ಮಹಿಳೆಯ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದು, ಆ ಸಂದರ್ಭ ಮಹಿಳೆಯ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಡಾ.ವಿ.ರವಿಂದ್ರ ತಿಳಿಸಿದ್ದಾರೆ.
ಬಳಿಕ ವಾಪಾಸ್ಸಾಗಿದ್ದ ಆರೋಪಿ ಸಂಜಯ್ ರಫಿಕಾಳ ಮಕ್ಕಳಿಗೆ ಸುಳ್ಳು ಹೇಳಿದ್ದು, ನಿಮ್ಮ ತಾಯಿ ಪಶ್ಚಿಮ ಬಂಗಾಳದಲ್ಲಿಯೇ ಉಳಿದುಕೊಂಡಿದ್ದಾಳೆ, ಕೆಲವು ದಿನಗಳ ಬಳಿಕ ಆಕೆ ಬರುತ್ತಾಳೆ ಎಂದಿದ್ದ. ಆದರೆ, ಈ ಬಗ್ಗೆ ಮಕ್ಸೂದ್ ಹಾಗೂ ಆತನ ಪತ್ನಿ ನಿಶಾ ರಫಿಕಾ ಎಲ್ಲಿ, ಯಾಕೆ ಅಲ್ಲಿ ಬಿಟ್ಟು ಬಂದೆ ಎಂದು ಪ್ರಶ್ನಿಸಿದ್ದಾರೆ. ಆದರೆ, ಆರೋಪಿ ಸಂಜಯ್ ಇದಕ್ಕೆ ಸರಿಯಾದ ಉತ್ತರ ನೀಡಲಿಲ್ಲ. ಈ ಬಗ್ಗೆ ಅನುಮಾನಗೊಂಡ ಮಕ್ಸೂದ್ ಪತ್ನಿ ನಿಶಾ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಆತ ನಿಶಾಳನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದಾನೆ.
ಮೇ 20 ರಂದು ಮಕ್ಸೂದ್ ಮಗನ ಹುಟ್ಟುಹಬ್ಬವಿತ್ತು. ಆ ಸಂದರ್ಭ ಆರೋಪಿ ಸಂಜಯ್ 50-60 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಮನೆಗೆ ಬಂದಿದ್ದ. ಬಳಿಕ ಊಟದಲ್ಲಿ ಮಿಕ್ಸ್ ಮಾಡಿದ್ದಾನೆ. ಮಕ್ಸೂದ್ ಕುಟುಂಬ ಮತ್ತೆ ಬಿಹಾರದ ಕಾರ್ಮಿಕರು ಆ ಊಟವನ್ನು ಮಾಡಿ ಅಲ್ಲೇ ನಿದ್ರೆಗೆ ಜಾರಿದ್ದಾರೆ. ಆ ದಿನ ಆರೋಪಿ ಸಂಜಯ್ ಮಕ್ಸೂದ್ ಮನೆಯಲ್ಲಿಯೇ ಉಳಿದು, ಮುಂಜಾನೆ 2 ಗಂಟೆಗೆ ಎದ್ದು ಎಲ್ಲರನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಬಾವಿ ಬಳಿ ಎಳೆದುಕೊಂಡು ಹೋಗಿ ಒಬ್ಬೊಬ್ಬರನ್ನೇ ಬಾವಿಗೆ ಎಸೆದು ಬಳಿಕ ಸೈಕಲ್ನಲ್ಲಿ ತನ್ನ ಮನೆಗೆ ವಾಪಾಸ್ಸಾಗಿದ್ದಾನೆ ಎಂದು ರವೀಂದ್ರ ಮಾಹಿತಿ ನೀಡಿದ್ದಾರೆ.
ಮೃತ ಮಕ್ಸೂದ್ ಫೋನ್ ಡಿಟೇಲ್ಸ್ ಆಧಾರದ ಮೇಲೆ ಆರೋಪಿ ಸಂಜಯ್ನನ್ನು ಶಂಕಿತ ಎಂದು ಗುರುತಿಸಲಾಗಿತ್ತು. ಮೇ 20ರಂದು ಆರೋಪಿ ಸಂಜಯ್ ಮಕ್ಸೂದ್ ಮನೆಯಿಂದ ಹೊರಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂತರ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯ ಹೇಳಿದ್ದಾನೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.