ಮುಂಬೈ, ಮೇ 26 (Daijiworld News/MB) : ದೇಶದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದೃಢವಾಗಿರುವ ಮಹಾರಾಷ್ಟ್ರವು ಕೊರೊನಾ ವಿರುದ್ಧ ಹೋರಾಟದಲ್ಲಿ ಕೇರಳದ ನೆರವನ್ನು ಕೋರಿದೆ.
ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ತೋಪೆ ಅವರು ಕೊರೊನಾ ನಿಯಂತ್ರಣದ ಕ್ರಮಗಳ ಕುರಿತಾಗಿ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರೊಂದಿಗೆ ಸಮಲೋಚನೆ ನಡೆಸಿದ್ದರು. ಬಳಿಕ ಅದರ ಮರುದಿನವೇ ಮಹಾರಾಷ್ಟ್ರದಲ್ಲಿ ಕೋವಿಡ್–19 ನೋಡಲ್ ಅಧಿಕಾರಿಯಾಗಿರುವ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ನಿರ್ದೇಶಕ ಡಾ.ಟಿ.ಪಿ.ಲಹಾನೆ ಅವರು ವೈದ್ಯರು ಮತ್ತು ದಾದಿಯರ ನೆರವು ಕೋರಿ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರಿಗೆ ಪತ್ರ ಬರೆದಿದ್ದು ಮುಂಬೈ ಮತ್ತು ಪುಣೆಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗುವ ಸಾಧ್ಯತೆಯಿದ್ದು 50 ತಜ್ಞ ವೈದ್ಯರು ಮತ್ತು ದಾದಿಯರನ್ನು ಕಳುಹಿಸಿ ಎಂದು ಆ ಪತ್ರದಲ್ಲಿ ಬರೆದಿದ್ದರು.
ಕೊರೊನಾ ಪ್ರಕರಣಗಳು ಅಧಿಕವಾಗುತ್ತಿರುವ ಕಾರಣದಿಂದಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಸರ್ಕಾರ ಮುಂಬೈ ನಗರದ ಮಹಾಲಕ್ಷ್ಮಿ ರೇಸ್ ಕೋರ್ಸ್ನಲ್ಲಿ 600 ಹಾಸಿಗೆಗಳ ಕೋವಿಡ್ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದ್ದು ಈ ಪೈಕಿ 125 ಹಾಸಿಗೆಗಳ ಐಸಿಯು ಕೂಡ ಇರಲಿದೆ. ಖಾಸಗಿ ಆಸ್ಪತ್ರೆಯ ವೈದ್ಯರನ್ನೂ ಇಲ್ಲಿ ನಿಯೋಜನೆ ಮಾಡಲಾಗಿದ್ದು ಆದರೆ ಹೆಚ್ಚಿನ ವೈದ್ಯರ ಅವಶ್ಯಕತೆಯಿದೆ. ಹಾಗಾಗಿ ಕೇರಳದಿಂದ 50 ತಜ್ಞ ವೈದ್ಯರು ಮತ್ತು ದಾದಿಯರನ್ನು ಕಳುಹಿಸಬೇಕಾಗಿ ಮನವಿ. ಈ ವೈದ್ಯಕೀಯ ಸಿಬ್ಬಂದಿಗಳಿಗೆ ಮಹಾರಾಷ್ಟ್ರ ಸರ್ಕಾರವು ವಸತಿ, ಊಟ, ಅಗತ್ಯ ಔಷಧ, ವೈಯಕ್ತಿಕ ರಕ್ಷಣಾ ಕಿಟ್ಗಳನ್ನು ಒದಗಿಸುತ್ತದೆ. ಎಂಬಿಬಿಎಸ್ ವೈದ್ಯರಿಗೆ ತಿಂಗಳಿಗೆ 80,000 ಹಾಗೂ ಎಂಡಿ / ಎಂಎಸ್ ತಜ್ಞ ವೈದ್ಯರಿಗೆ ತಿಂಗಳಿಗೆ 2 ಲಕ್ಷ ರಾಜ್ಯವು ಪಾವತಿ ಮಾಡುತ್ತದೆ. ತರಬೇತಿ ಪಡೆದ ಶುಶ್ರೂಷಕ ಸಿಬ್ಬಂದಿಗೆ ತಿಂಗಳಿಗೆ 30,000 ನೀಡುತ್ತದೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.