ನವದೆಹಲಿ, ಮೇ 26 (DaijiworldNews/PY) : ಭಾರತವೀಗ ವಿಫಲವಾದ ಲಾಕ್ಡೌನ್ನ ಪರಿಣಾಮವನ್ನು ಎದುರಿಸುತ್ತಿದೆ. ದೇಶದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಹಬ್ಬುತ್ತಿದೆ. ಈಗ ನಿಮ್ಮ ಯೋಜನೆ ಏನು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಳಿದ್ದಾರೆ.
ನಾಲ್ಕು ಹಂತಗಳ ಲಾಕ್ಡೌನ್ನಿಂದಲೂ ಪ್ರಧಾನಿ ಮೋದಿ ಅವರು ನಿರೀಕ್ಷೆ ಮಾಡಿದಷ್ಟು ಉತ್ತಮವಾದ ಫಲಿತಾಂಶ ಬಂದಿಲ್ಲ ಎಂದಿದ್ದಾರೆ.
ಭಾರತದ ಜಿಡಿಪಿ ಶೇ 1ಕ್ಕಿಂತಲೂ ಕಡಿಮೆ ಇದೆ. ಲಾಕ್ಡೌನ್ನ ಉದ್ದೇಶ ವಿಫಲವಾಗಿದೆ ಎನ್ನುವುದು ಸ್ಪಷ್ಟ. ಸಿಎಂ ಜೊತೆ ಮಾತನಾಡಿದ್ದೇನೆ. ಕೊರೊನಾ ವಿರುದ್ದ ಮುಖ್ಯಮಂತ್ರಿಗಳು ಒಂಟಿಯಾಗಿ ಹೋರಾಡುತ್ತಿದ್ದಾರೆ. ಹಾಗಿದ್ದಲ್ಲಿ ಕೇಂದ್ರದ ಯೋಜನೆ ಏನು? ಹಣಕಾಸು ಹರಿವಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದು ರಾಜಕೀಯವಲ್ಲ. ನನ್ನ ಕಳಕಳಿ. ಸೋಂಕು ಜಾಸ್ತಿಯಾಗುತ್ತಿದೆ. ಹಾಗಾಗಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದಿದ್ದಾರೆ.
ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳ ದಿವಾಳಿಯಾಗಲಿವೆ. ಈ ಉದ್ದಿಮೆಗಳಿಗೆ ಬಂಡವಾಳದ ಅಗತ್ಯವಿದೆ. ಒಂದು ವೇಳೆ ಹೀಗೆ ಮಾಡದಿದ್ದಲ್ಲಿ ಪರಿಣಾಮ ಮಾರಕವಾಗಲಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರ ತಂತ್ರಗಾರಿಕೆ ಏನು? ಲಾಕ್ಡೌನ್ ಅನ್ನು ಹೇಗೆ ನಿರ್ವಹಿಸಲಿದ್ದಾರೆ? ಯಾವ ರೀತಿಯಾಗಿ ಕಾರ್ಮಿಕರಿಗೆ ಸಹಾಯ ಮಾಡಲಿದ್ದಾರೆ? ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳ ಸಹೋದರ ಸಹೋದರಿಯರಿಗೆ ಹೇಗೆ ನೆರವಾಗುತ್ತಾರೆ? ಎಂದು ಕೇಳಿದ್ದಾರೆ.