ನವದೆಹಲಿ, ಮೇ 26 (Daijiworld News/MSP): ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಂದ ಹಿಡಿದು ಉದ್ಯಮಿಗಳವರೆಗೂ ಸಂಕಷ್ಟಗೀಡಾಗಿದ್ದಾರೆ. ದಿನಸಿ, ಅಂಗಡಿ ಮುಂಗಟ್ಟು ತೆರೆಯುವಂತೆ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿದ್ರೂ ಸಿನಿಮಾ ಥಿಯೇಟರ್, ಮಾಲ್ ಗಳನ್ನು ಓಪನ್ ಮಾಡಲು ಸರ್ಕಾರದಿಂದ ಇನ್ನು ಗ್ರೀನ್ ಸಿಗ್ನಲ್ ದೊರಕಿಲ್ಲ.
ಈ ಹಿನ್ನಲೆಯಲ್ಲಿ ಶಾಪಿಂಗ್ ಸೆಂಟರ್ ಒಕ್ಕೂಟ ವೂ ಸರ್ಕಾರ ರೆಪೊ ದರ ಕಡಿತ, ಇಎಂಐ ಪಾವತಿ ವಿಸ್ತರಣೆ ಜೊತೆಗೆ ಇನ್ನೂ ಹಲವು ಆರ್ಥಿಕ ನೆರವು ಕ್ರಮಗಳನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಸುಮಾರು 90 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಶಾಪಿಂಗ್ ಮಾಲ್ ಉದ್ಯಮಗಳ ದ್ರವ್ಯತೆ ಅಗತ್ಯಗಳಿಗೆ ಆರ್ ಬಿಐ ಕ್ರಮ ಮಾತ್ರ ಸಾಕಾಗುವುದಿಲ್ಲ. ಶಾಪಿಂಗ್ ಸೆಂಟರ್ ನ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಸಾಲ ಮರು ಪಾವತಿಯ ಅವಧಿ ವಿಸ್ತರಣೆಯೂ ಉದ್ಯಮದ ಮೇಲೆ ಹಣದ ಹರಿವಿಗೆ ಹೆಚ್ಚು ಸಹಾಯ ಮಾಡುವುದಿಲ್ಲ ಎಂದು ಶಾಪಿಂಗ್ ಸೆಂಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅಮಿತಾಬ್ ತನೆಜ ಹೇಳಿದ್ದಾರೆ.
ಶಾಪಿಂಗ್ ಮಾಲ್ ಗಳು ಬ್ರ್ಹತ್ ನಗರ ಮತ್ತು ಮೆಟ್ರೊ ಸಿಟಿಗಳಲ್ಲಿ ಮಾತ್ರವಿದ್ದು, ದೊಡ್ಡ ಡೆವೆಲಪರ್ ಗಳು, ಖಾಸಗಿ ಹೂಡಿಕೆದಾರರು ಮತ್ತು ವಿದೇಶಿ ಹೂಡಿಕೆದಾರರು ಮಾತ್ರ ಹೂಡಿಕೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆಯಿದೆ. ಬಹುತೇಕ ಮಾಲ್ ಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಣ್ಣ- ಸಣ್ಣ ನಗರಗಳಲ್ಲಿವೆ, ಇವೆಲ್ಲವೂ ಇಂದು ತಮ್ಮ ಉಳಿವಿಗಾಗಿ ಹೋರಾಡುತ್ತಿವೆ ಎಂದು ಹೇಳಿದ್ದಾರೆ.