ಬೆಂಗಳೂರು, ಮೇ 26 (Daijiworld News/MSP): ಕೊರೊನಾವೈರಸ್ ಪ್ರಭಾವದಿಂದಾಗಿ ಅತಿ ಹೆಚ್ಚು ಪೆಟ್ಟು ತಿಂದಿರುವುದರಲ್ಲಿ ಹೋಟೆಲ್ ಉದ್ಯಮ ಕೂಡ ಒಂದು. ಲಾಕ್ಡೌನ್ ಸಡಿಲಗೊಳಿಸಿ ಬಹುತೇಕ ಆರ್ಥಿಕ ಚಟುವಟಿಕೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಸರ್ಕಾರ ಹೋಟೆಲ್ಗಳ ಮೇಲಿನ ನಿರ್ಬಂಧ ಮಾತ್ರ ಮುಂದುವರಿಸಿದೆ. ಈ ನಡುವೆ ಹೋಟೆಲ್ ಉದ್ಯಮ ಸಂಕಷ್ಟದಲ್ಲಿ ತಿಂಗಳ ನಂತರ ಹೋಟೆಲ್ ಪುನರಾರಂಭಕ್ಕೆ ಸಿಎಂ ಯಡಿಯೂರಪ್ಪ ಅವರು ಅವಕಾಶ ಮಾಡಿಕೊಡಲಿದ್ದಾರೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಹೋಟೆಲ್ ಉದ್ಯಮ ಸಿಲುಕಿದೆ. ಆದರೂ ಹೋಟೆಲ್ ಮಾಲೀಕರು ಸಿಬ್ಬಂದಿಗಳಿಗೆ 2-3 ತಿಂಗಳಿನಿಂದಲೂ ವೇತನ ಕೊಟ್ಟು ಸಲಹುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಸಂಕಟ ಹೇಳಿಕೊಂಡಿದ್ದಾರೆ. ಮೇ 31ಕ್ಕೆ ನಾಲ್ಕನೇ ಹಂತ ಲಾಕ್ಡೌನ್ ಅವಧಿ ಮುಗಿಯಲಿದೆ. ಹೀಗಾಗಿ ಜೂ.1 ರ ಬಳಿಕ ಸಿಎಂ ಹೋಟೆಲ್ ಡೈನಿಂಗ್ ಗೆ ಅವಕಾಶ ಮಾಡಿಕೊಡ್ತಾರೆ ಎನ್ನುವ ವಿಶ್ವಾಸವಿದೆ ವಿಶ್ವನಾಥ್ ಹೇಳಿದ್ದಾರೆ
ಹೋಟೆಲ್ ಪುನರಾರಂಭಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಬಿಸಿ ನೀರನ್ನು ಬಳಕೆ ಮಾಡುವುದು, ಹಾಗೂ ಪಾರ್ಸಲ್ ಗಳಿಗೆ ಹೆಚ್ಚು ಉತ್ತೇಜನ ನೀಡುವುದು ಮುಂತಾದ ಷರತ್ತು ಬದ್ಧ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಅವರು ಇದೇ ಸಂದರ್ಭ ತಿಳಿಸಿದರು.