ಮಡಿಕೇರಿ, ಮೇ 26 (Daijiworld News/MB) : ಕೊಡಗಿನಲ್ಲಿ ಭಾರೀ ಭೂಕಂಪವಾಗಿ ಜಿಲ್ಲೆ ನೆಲಸಮವಾಗುತ್ತದೆ ಎಂದು ಭವಿಷ್ಯ ನುಡಿದಿದ್ದ ಪ್ರಖ್ಯಾತ ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ನಾಗೇಂದ್ರ ಬಾಬು ಶರ್ಮಾ ವಿರುದ್ಧವಾಗಿ ಕೊಡಗು ಪೊಲೀಸ್ ಠಾಣೆಯಲ್ಲಿ ಜನರಲ್ಲಿ ಭಯ ಉಂಟು ಮಾಡಿದ ಹಿನ್ನಲೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಅವರ ವಿರುದ್ಧ ಕೊಡಗಿ ಬೆಳೆಗಾರರ ಒಕ್ಕೂಟವು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಬ್ರಹ್ಮಾಂಡ ಗುರೂಜಿಯವರು ಜನರಲ್ಲಿ ಆತಂಕ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗುರೂಜಿ ನುಡಿದಿರುವ ಭವಿಷ್ಯವನ್ನು ಸರಕಾರ ಒಂದು ವೇಳೆ ಈ ನಂಬುತ್ತದೆ ಎಂದಾದಲ್ಲಿ, ಭಾರಿ ಭೂಕಂಪ ಯಾವ ದಿನದಂದು, ಎಷ್ಟು ಸಮಯಕ್ಕೆ ಆಗುತ್ತದೆ ಹಾಗೂ ಎಷ್ಟು ಪ್ರಮಾಣದಲ್ಲಿ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತದೆ ಎಂದು ಹೇಳಲಿ. ಕೊಡಗಿನ ಯಾವ ಪ್ರದೇಶದಲ್ಲಿ ಭೂಕಂಪನವಾಗುತ್ತದೆ ಎಂದು ತಿಳಿಸಲಿ. ಸರಕಾರ ಇದನ್ನು ವೈಜ್ಞಾನಿಕವಾಗಿ ಧೃಡೀಕರಿಸುತ್ತದೆಯೋ ಇಲ್ಲವೋ ಎಂಬುವುದು ಕೂಡಾ ಮುಖ್ಯವಾಗಿದೆ. ಸರ್ಕಾರ ಬ್ರಹ್ಮಾಂಡ ಗುರೂಜಿ ಎಂಬ ಭವಿಷ್ಯ ಹೇಳುವ ವ್ಯಕ್ತಿ ಮಾತನ್ನು ಅಧಿಕೃತವಾಗಿ ನಂಬುವುದಾದಲ್ಲಿ, ಆತಂಕದಲ್ಲಿರುವ ಜನರಿಗೆ ಸುರಕ್ಷಿತವಾದ ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಇತ್ತೀಚೆಗೆ ಬ್ರಹ್ಮಾಂಡ ಗುರೂಜಿಯವರು ಕೊರೊನಾ ಪರಿಣಾಮದ ಕುರಿತಾಗಿ ಮಾತನಾಡುತ್ತಾ, ಕೊರೊನಾದಿಂದ ಜನರು ಪಾರಾಗಬೇಕಾದ್ದಲ್ಲಿ ದೇವರ ಸ್ಮರಣೆ ಮಾಡಬೇಕು. 2 ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೊಡಗಿನಲ್ಲಿ ಮುಂದೆ ಭಾರೀ ಭೂಕಂಪವಾಗಲಿದ್ದು ಜಿಲ್ಲೆಯೇ ನೆಲಸಮವಾಗಲಿದೆ ಎಂದು ಹೇಳಿದ್ದರು.