ನವದೆಹಲಿ, ಮೇ 26 (Daijiworld News/MB) : ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಲಾಕ್ಡೌನ್ಗಿಂತ ಮೊದಲು ಮೂರು ದಿನದಲ್ಲಿ ಸೋಂಕು ಪ್ರಕರಣ ದ್ವಿಗುಣವಾಗುತ್ತಿತ್ತು. ಆದರೆ ಲಾಕ್ಡೌನ್ ಬಳಿಕ 13 ದಿನದಲ್ಲಿ ಸೋಂಕು ಪ್ರಕರಣ ದ್ವಿಗುಣವಾಗುತ್ತದೆ. ಆ ನಿಟ್ಟಿನಲ್ಲಿ ದೇಶದಲ್ಲಿ ಕೊರೊನಾ ಲಾಕ್ಡೌನ್ ಯಶಸ್ವಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಯಾವೆಲ್ಲ ರೀತಿಯಲ್ಲಿ ರಾಜಕೀಯ ಮಾಡಲು ಮುಂದಾಗುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿ ಇಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿದ ಮಾತುಗಳೇ ಸಾಕ್ಷಿ. ಲಾಕ್ಡೌನ್ ಘೋಷಣೆ ಮಾಡಿದಾಗ ಯಾಕಾಗಿ ಲಾಕ್ಡೌನ್ ಎಂದು ಪ್ರಶ್ನೆ ಮಾಡಿದ್ದ ಕಾಂಗ್ರೆಸ್ ಈಗ ಲಾಕ್ಡೌನ್ ಯಾಕೆ ಸಡಿಲಿಕೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದೆ. ಕಾಂಗ್ರೆಸ್ ಎರಡು ರೀತಿಯಾಗಿ ಮಾತನಾಡುತ್ತದೆ ಎಂದು ಇದರಲ್ಲೇ ತಿಳಿದು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯವರು ಬಡವರಿಗೆ ನಗದು ನೀಡುವಂತೆ ಆಗ್ರಹಿಸಿದ್ದರು. ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ವಲಸೆ ಕಾರ್ಮಿಕರಿಗೆ ನಗದು ನೀಡಲಾಗಿದೆ. ಆದರೆ ಕಾಂಗ್ರೆಸ್ ಆಡಳಿತವಿರುವ ಯಾವ ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ನಗದು ನೀಡಲಾಗಿದೆ? ಎಂದು ಪ್ರಶ್ನಿಸಿದರು.
ಅಮೆರಿಕ, ಫ್ರಾನ್ಸ್ ಮತ್ತು ಸ್ಪೇನ್ಗೆ ಹೋಲಿಸಿದರೆ ಭಾರತದಲ್ಲಿ ಲಾಕ್ಡೌನ್ನಿಂದಾಗಿ ಸಮಸ್ಯೆಯಾಗಿದ್ದು ಕಡಿಮೆ ಎಂದು ಹೇಳಿದರು.
ದೇಶದಲ್ಲಿ 3000 ರೈಲುಗಳಲ್ಲಿ ಸುಮಾರು 45 ಲಕ್ಷ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲಾಗಿದೆ. ಇದು ಐತಿಹಾಸಿಕ ಸಂಗತಿ. 80 ಕೋಟಿಗಿಂತಲೂ ಹೆಚ್ಚು ಬಡವರಿಗೆ 5 ತಿಂಗಳು ಉಚಿತ ಪಡಿತರ ನೀಡಲಾಗಿದೆ. 9 ಕೋಟಿ ರೈತರಿಗೆ 2000 ಹಣ ವರ್ಗಾವಣೆ ಮಾಡಲಾಗಿದೆ. 20 ಕೋಟಿ ಮಹಿಳೆಯರಿಗೆ ತಲಾ 500 ಮತ್ತು 8 ಕೋಟಿ ಮನೆಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಬಡವರಿಗೆ 7,500 ನೀಡಬೇಕೆಂದು ರಾಹುಲ್ ಗಾಂಧಿ ಹೇಳಿದ್ದರು. ಇದು ಅದಕ್ಕಿಂತಲೂ ಹೆಚ್ಚು ಎಂದು ಹೇಳಿದ್ದಾರೆ.