ನವದೆಹಲಿ, ಮೇ 26 (Daijiworld News/MB) : ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ನೀಡುವುದರಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತಾಗಿ ಕೇಂದ್ರ ಸರ್ಕಾರವು ಒಂದು ವಾರದೊಳಗೆ ಉತ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ಅರ್ಜಿಯನ್ನು ಕಂಪನಿಗಳ ಗುಂಪು ಸಲ್ಲಿಸಿದ್ದು ಲಾಕ್ಡೌನ್ ಸಂದರ್ಭದಲ್ಲಿ ಹಣಕಾಸಿನ ತೊಂದರೆ ಇರುವುದರಿಂದ ಕಾರ್ಮಿಕರಿಗೆ ಪೂರ್ಣ ವೇತನ ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿತ್ತು.
ಲಾಕ್ಡೌನ್ ಸಮಯದಲ್ಲಿ ಸರ್ಕಾರದ ಕ್ರಮಗಳಿಂದ ಬಹಳಷ್ಟು ಜನರು ಸಂಕಷ್ಟಕ್ಕೀಡಾಗಿರುವುದರಿಂದಾಗಿ 'ಈ ವಿಷಯವನ್ನು ತುರ್ತಾಗಿ ಪರಿಗಣಿಸುವಂತೆ' ಸುಪ್ರೀಂ ಕೋರ್ಟ್ನ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಉತ್ತರಿಸುವಂತೆ ಸೂಚಿಸಿದೆ.
ಮಾರ್ಚ್ನಲ್ಲಿ, ಉದ್ಯೋಗದಾತರು ಕಾರ್ಮಿಕರಿಗೆ ಪೂರ್ಣ ವೇತನವನ್ನು ಪಾವತಿಸುವುದು ಮತ್ತು ಅವರ ಉದ್ಯೋಗಗಳನ್ನು ರಕ್ಷಿಸುವುದನ್ನು ಕಡ್ಡಾಯಗೊಳಿಸುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಹಿ ಮಾಡಿದ ಆದೇಶವನ್ನು ಸರ್ಕಾರ ಅಂಗೀಕರಿಸಿತ್ತು.