ಭುವನೇಶ್ವರ್, ಮೇ 26 (Daijiworld News/MB) : ಕಟಕ್ ಜಿಲ್ಲೆಯ ಕ್ವಾರಂಟೈನ್ ಸೆಂಟರ್ವೊಂದರ ಬಳಿ ಸೋಮವಾರ ರಕ್ಷಿಸಲಾದ ಹೆಣ್ಣು ಪ್ಯಾಂಗೊಲಿನ್ಗೆ ಕೊರೊನಾ ಪರೀಕ್ಷೆ ನಡೆಸಲು ಒಡಿಶಾದ ವನ್ಯಜೀವಿ ವಿಭಾಗದ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ವಿಭಾಗೀಯ ಅರಣ್ಯಾಧಿಕಾರಿ ಸಸ್ಮಿತಾ ಲೆಂಕಾ, ಸ್ಥಳೀಯ ಮುಖಂಡರು ನೀಡಿದ ಮಾಹಿತಿ ಆಧಾರದಲ್ಲಿ ಕ್ವಾರಂಟೈನ್ ಕೇಂದ್ರದ ಬಳಿ ತೆರಳಿದ ನಮ್ಮ ತಂಡ ಪ್ಯಾಂಗೊಲಿನ್ನ್ನು ರಕ್ಷಣೆ ಮಾಡಿದೆ. ಆ ಕೇಂದ್ರದ ಬಳಿ 42 ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಆ ಕಾರಣದಿಂದಾಗಿ ಅದನ್ನು ಕಾಡಿಗೆ ಬಿಡುವ ಮುನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರಿವೆಂಟಿವ್ ಔಷಧ ಇಲಾಖೆ ಮುಖ್ಯಸ್ಥ ಡಾ. ನಿರಂಜನ್ ಶಾಹೂ ಮಾತನಾಡಿದ ಮನುಷ್ಯರ ಸ್ವಾಬ್ ಪರೀಕ್ಷೆಯಂತೆ ಯಾವುದೇ ಪ್ರಯೋಗಾಲಯದಲ್ಲಾದರೂ ಪ್ಯಾಂಗೊಲಿನ್ ಪರೀಕ್ಷೆ ನಡೆಸಬಹುದು ಎಂದು ತಿಳಿಸಿದ್ದಾರೆ.
ಹಾಗೆಯೇ ಈ ಪ್ಯಾಂಗೊಲಿನ್ ಹೇಗೆ ಕ್ವಾರಂಟೈನ್ ಕೇಂದ್ರಕ್ಕೆ ಬಂತು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.