ತಿರುವನಂತಪುರ, ಮೇ 27 (Daijiworld News/MB) : ಕೇರಳದಲ್ಲಿ ಕೊರೊನಾ ಇನ್ನೂ ಕೂಡಾ ಸಮುದಾಯ ಪ್ರಸರಣ ಹಂತ ತಲುಪಿಲ್ಲ. ಆದರೆ ಅದರ ಅಂಚಿನಲ್ಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಮಂಗಳವಾರ ಒಂದೇ ದಿನದಲ್ಲಿ 67 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 963 ತಲುಪಿದೆ. ನಿಗಾದಲ್ಲಿರುವವರ ಸಂಖ್ಯೆ ಲಕ್ಷ ದಾಟಿದೆ ಈ ಹಿನ್ನಲೆಯಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ರೆಡ್ಝೋನ್ಗಳಿಂದ ಬರುವವರಿಂದ ಸೋಂಕು ಹರಡುವ ಅಪಾಯವಿದೆ. ಜನರು ಹಾಗೂ ಅದರಲ್ಲೂ ಮುಖ್ಯವಾಗಿ ಕ್ವಾರಂಟೈನ್ನಲ್ಲಿರುವವರು ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಸಮುದಾಯ ಪ್ರಸರಣದ ಅಪಾಯ ಅಧಿಕ. ಹಾಗಾಗಿ ಕೆಂಪು ವಲಯದಿಂದ ಬರುವವರು ರೂಂ ಕ್ವಾರಂಟೈನ್ನಲ್ಲಿ ಇರಬೇಕು. ಯಾವ ನಿರ್ದೇಶನವನ್ನು ಪಾಲಿಸದಿದ್ದಲ್ಲಿ ಈವರೆಗೆ ಕೊರೊನಾ ಹರಡುವಿಕೆ ನಿಯಂತ್ರಣವೆಲ್ಲಾ ವಿಫಲವಾಗಿ ರಾಜ್ಯವು ಸಮುದಾಯ ಪ್ರಸರಣದತ್ತ ಸಾಗಬಹುದು ಎಂದು ಹೇಳಿದರು.
ವಿದೇಶದಿಂದ ಬರುವವರು 7 ದಿನಗಳ ಸರ್ಕಾರಿ ಕ್ವಾರಂಟೈನ್ ಸೌಲಭ್ಯಕ್ಕಾಗಿ ಪಾವತಿಸಬೇಕು. ಕೇರಳಕ್ಕೆ ಲಕ್ಷಾಂತರ ಮಂದಿ ವಿದೇಶಗಳಿಂದ ವಾಪಾಸ್ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಎಲ್ಲಾ ನಿಭಾವನೆ ಕಷ್ಟವಾಗುವ ಸಾಧ್ಯತೆಯಿದೆ. ಆದರೆ ಜನರು ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಕ್ವಾರಂಟೈನ್ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮಂಗಳವಾರ ದೃಢಪಟ್ಟ 67 ಪ್ರಕರಣಗಳಲ್ಲಿ 27 ಮಂದಿ ವಿದೇಶಗಳಿಂದ ಮತ್ತು 33 ಜನ ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ.