ನವದೆಹಲಿ, ಮೇ 27 (Daijiworld News/MB) : ಆರೋಗ್ಯ ಸೇತು ಆಪ್ನಲ್ಲಿ ಸುರಕ್ಷತೆಯಲ್ಲಿನ ನ್ಯೂನತೆ ಕಂಡುಹಿಡಿದವರಿಗೆ ಮೂರು ಭಾಗಗಳಲ್ಲಿ ತಲಾ 1 ಲಕ್ಷ ರೂಪಾಯಿಗಳಂತೆ ಬಹುಮಾನ ನೀಡಲಾಗುತ್ತದೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರದ ಮಹಾ ನಿರ್ದೇಶಕ ನೀತಾ ವರ್ಮಾ ತಿಳಿಸಿದ್ದಾರೆ.
ಆರೋಗ್ಯ ಸೇತು ಆಪ್ನಲ್ಲಿ ನ್ಯೂನತೆ ಕಂಡುಹಿಡಿದವರಿಗೆ ಹಾಗೂ ಆಪ್ನ ಅಭಿವೃದ್ಧಿಗಾಗಿ ಸಲಹೆ ನೀಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಅವುಗಳನ್ನು ನಾಲ್ಕು ಭಾಗಗಳಾಗಿ ವಿಂಗಡನೆ ಮಾಡಲಾಗಿದೆ. ಆಪ್ನಲ್ಲಿರುವ ಸುರಕ್ಷತೆಯಲ್ಲಿನ ನ್ಯೂನತೆ ಕಂಡು ಹಿಡಿದರವರಿಗೆ ಮೂರು ಭಾಗಗಳಲ್ಲಿ ತಲಾ 1 ಲಕ್ಷ ರೂಪಾಯಿಗಳಂತೆ ಪ್ರಶಸ್ತಿ ನೀಡಲಾಗುತ್ತದೆ.ಹಾಗೆಯೇ ಆಪ್ ಅಭಿವೃದ್ಧಿ ಬಗ್ಗೆ ತಿಳಿಸಿದ್ದಲ್ಲಿ 1 ಲಕ್ಷ ರೂಪಾಯಿ ಪ್ರಶಸ್ತಿಯಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಸೋಂಕಿತರು ಇರುವ ಬಗ್ಗೆ ಮಾಹಿತಿ ನೀಡುವ ಆರೋಗ್ಯ ಸೇತು ಆಪ್ನ ಮೂಲ ಕೋಡ್ನ್ನು ತೆರೆಯುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು ಅದರ ಸುರಕ್ಷತೆಗೆ ಹಲವು ಕ್ರಮಗಳನ್ನು ಅನುಸರಿಸಲು ಮುಂದಾಗಿದೆ. ಆರೋಗ್ಯ ಸೇತು ಆಪ್ನ ಮೂಲ ಕೋಡ್ ಗಿಥಬ್ನಲ್ಲಿ ಮಧ್ಯರಾತ್ರಿ 12 ಗಂಟೆ ಬಳಿಕ ದೊರೆಯುತ್ತದೆ.
ಈ ಆಪ್ನ್ನು ಏಪ್ರಿಲ್ 2ರಂದು ಆರಂಭಿಸಲಾಗಿದ್ದು ಪ್ರಸ್ತುತ 11.5 ಕೋಟಿ ಬಳಕೆದಾರರಿದ್ದಾರೆ.