ಬೆಂಗಳೂರು, ಮೇ 27 (Daijiworld News/MB) : ಜೂನ್ 1 ರಿಂದ ದೇವಸ್ಥಾನ ಮಾತ್ರವಲ್ಲದೇ ಮಸೀದಿ, ಚರ್ಚ್ಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದ ಆವರಣದಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಪುಣ್ಯತಿಥಿ ಅಂಗವಾಗಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದೇವಸ್ಥಾನಕ್ಕೆ ಜೂನ್ 1ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಇದು ಚರ್ಚ್ ಮತ್ತು ಮಸೀದಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲೇ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ಆರಂಭ ಮಾಡಲು ಅನುಮತಿ ನೀಡುವಂತೆ ಹೆಚ್ಚಿನ ಒತ್ತಡವಿದ್ದು ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೋಟೆಲ್ ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಲಾಕ್ಡೌನ್ ಸಡಿಲವಾದ ಕಾರಣ ಹಲವು ಜನರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದು ಅವರಿಗೆ ಊಟ, ಅಪಹಾರದ ವ್ಯವಸ್ಥೆ ಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಎದುರು ನೋಡಲಾಗುತ್ತಿದೆ ಎಂದು ಹೇಳಿದರು.
ಮಂಗಳವಾರ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜೂ.1 ರಿಂದ ಪೂಜೆ, ಸೇವಾದಿಗಳಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ. ಮಸೀದಿ, ಚರ್ಚ್ ತೆರೆಯುವ ಬಗ್ಗೆ ಇನ್ನು ತೀರ್ಮಾನವಾಗಿಲ್ಲ ಎಂದು ಹೇಳಿದ್ದರು.