ಪಾಟ್ನಾ, ಮೇ 27 (Daijiworld News/MSP): ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಒಂದೊಂದೆ ಕರುಣಾಜನಕ ಕಥೆಗಳು ಹೊರ ಬರುತ್ತಿವೆ. ವಿದೇಶದಲ್ಲಿ ಸಿಲುಕಿಕೊಂಡವರ ನೋವು ಒಂದೆಡೆಯಾದರೆ ವಲಸಿಗ ಕಾರ್ಮಿಕರ ಗೋಳು ಇನ್ನೊಂದು ರೀತಿ.. ಇಂಥದ್ದೇ ಮನಕಲಕುವ ಘಟನೆ ಬಿಹಾರದ ಮುಜಾಫರ್ ಪುರದ ರೈಲು ನಿಲ್ದಾಣದಲ್ಲಿ ನಡೆದಿದೆ. "ಮಗುವೊಂದು ಬಿಹಾರದ ನಿಲ್ದಾಣವೊಂದರಲ್ಲಿ ತನ್ನ ತಾಯಿಯ ಮೃತ ಶವದೊಡನೆ ಆಡುತ್ತಿದ್ದು ಇದು ಕೊರೊನಾ ಲಾಕ್ಡೌನ್ನಿಂದ ಸಿಕ್ಕಿಬಿದ್ದ ವಲಸಿಗರ ದೈನಂದಿನ ವರದಿಗಳಲ್ಲಿ ಹೊರಹೊಮ್ಮುವ ಅತ್ಯಂತ ದುರಂತ ದೃಶ್ಯಗಳಲ್ಲಿ ಒಂದಾಗಿದೆ .
ಬಿಹಾರದ ಮುಜಾಫರ್ ಪುರದ ನಿಲ್ದಾಣ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ದೃಶ್ಯಗಳಲ್ಲಿ ವಲಸೆ ಕಾರ್ಮಿಕಳಾಗಿದ್ದ ತಾಯಿ ರೈಲ್ವೆ ನಿಲ್ದಾಣದಲ್ಲೇ ಮೃತಪಟ್ಟಿದ್ದಾಳೆ, ಇದ್ಯಾವುದರ ಪರಿವೇ ಇಲ್ಲದೆ ಎಳೆಯ ಮಗು ಎದ್ದೇಳಮ್ಮಾ ಎನ್ನುತ್ತಾ ಆಟವಾಡುತ್ತಾ ಆಕೆಯ ವಸ್ತ್ರ ಎಳೆದು ನಿರಂತರವಾಗಿ ತಾಯಿಯನ್ನು ಎಬ್ಬಿಸುವ ಪ್ರಯತ್ನದಲ್ಲಿದೆ.
ಇನ್ನು ಮೃತ ಮಹಿಳೆಯ ಕುಟುಂಬದ ಪ್ರಕಾರ" ಭಾನುವಾರ ಗುಜರಾತ್ನಿಂದ ರೈಲು ಹತ್ತಿದ್ದ ಈ ಮಹಿಳೆ ಆಹಾರ ಮತ್ತು ನೀರಿನ ಕೊರತೆಯಿಂದಾಗಿ ರೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಳು, ಮುಜಾಫರ್ ಪುರದಿಂದ ರೈಲು ಹೊರಡುವ ಸ್ವಲ್ಪ ಸಮಯದ ಮೊದಲು ಮಹಿಳೆ ರೈಲು ನಿಲ್ದಾಣದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾಳೆ. ಆಕೆಯ ದೇಹವನ್ನು ಸ್ಟೇಷನ್ ಪ್ಲಾಟ್ಫಾರ್ಮ್ನಲ್ಲಿ ಮಲಗಿಸಿದ ಬಳಿಕ, ಅವಳ ಪುಟ್ಟ ಮಗ ಆಟವಾಡುತ್ತಾ ಆಕೆಯನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿತ್ತು.
ಇದೇ ನಿಲ್ದಾಣದಲ್ಲಿ ಇನ್ನೊಂದು ಪ್ರಕರಣದಲ್ಲಿ, ಎರಡು ವರ್ಷದ ಮಗುವೊಂದು ಅಸಮರ್ಪಕ ಆಹಾರದ ಹಾಗೂ ಅತಿಯಾದ ಬಿಸಿಲಿನ ಶಾಖದಿಂದ ಸಾವನ್ನಪ್ಪಿರುವ ವರದಿಯಾಗಿದೆ. ಈ ಮಗುವಿನ ಕುಟುಂಬ ಭಾನುವಾರ ದೆಹಲಿಯಿಂದ ರೈಲಿನಲ್ಲಿ ತಮ್ಮೂರಿನತ್ತ ಆಗಮಿಸಿಲು ಬಯಸಿತ್ತು..
ಮಾರ್ಚ್ ಅಂತ್ಯದಲ್ಲಿ ಭಾರತಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಖ್ ಡೌನ್ ಹೇರಲಾದ ಬಳಿಕ , ಲಕ್ಷಾಂತರ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಉದ್ಯೋಗ ಹಣವಿಲ್ಲದೆ, ವಲಸಿಗರು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಮನೆಗಳಿಗೆ ಸಾವಿರಾರು ಕಿಲೋಮೀಟರ್ ದೂರದಲ್ಲಿ, ಕಾಲ್ನಡಿಗೆಯಲ್ಲಿ ಸೈಕಲ್, ಟ್ರಕ್ಗಳಲ್ಲಿ ಹೊರಟಿದ್ದರು. ಆದರೆ ರಸ್ತೆ ಅಪಘಾತಗಳಲ್ಲಿ ಅಥವಾ ಹಸಿವು ಮತ್ತು ಬಳಲಿಕೆಯಿಂದ ಅನೇಕರು ಮನೆಗೆ ತಲುಪುವ ಮೊದಲೇ ಮೃತಪಟ್ಟಿರುವ ಸಂಗತಿಗಳು ನಿತ್ಯವೂ ವರದಿಯಾಗುತ್ತಲೇ ಇದೆ.