ಬೆಂಗಳೂರು, ಮೇ 27 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ತೊಂದರೆಯಲ್ಲಿರುವ ಜನರಿಗಾಗಿ ರಾಜ್ಯ ಸಾಕಷ್ಟು ಪರಿಹಾರ ಘೋಷಣೆ ಮಾಡಿದ್ದು ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಶಕ್ತಿ ಮೀರಿ ದೇವರು ಮೆಚ್ಚುವ ಕಾರ್ಯ ಮಾಡಿದ್ದು ಇನ್ನು ಯಾವುದೇ ಘೋಷಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆಗೆ ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಬಳಿಕ ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂಬ ವಿಪಕ್ಷದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ವಿವಿಧ ವರ್ಗದ ಜನರಿಗೆ ಘೋಷಣೆ ಮಾಡಿರುವ ಪರಿಹಾರ ಅವರಿಗೆ ತಲುಪುತ್ತಿದ್ದು ಯಾವುದೆ ಸಮಸ್ಯೆ ಉಂಟಾಗಿಲ್ಲ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾವು ಕೊರೊನಾ ಜೊತೆ ಬುದುಕುವುದನ್ನು ಕಲಿಯುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಹೊರ ರಾಜ್ಯದಿಂದ ಹಲವಾರು ಜನರು ಕರ್ನಾಟಕಕ್ಕೆ ಬರುತ್ತಿದ್ದು ಅವರಿಗೆ ವಸತಿಯ ಸಮಸ್ಯೆ ಉಂಟಾಗಿದೆ. ಅವರೆಲ್ಲರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕೇಂದ್ರಕ್ಕೆ ಮಾಲ್, ರೆಸ್ಟೂರೆಂಟ್ ತೆರೆಯಲು ಅನುಮತಿ ನೀಡುವಂತೆ ಬರೆದಿರುವ ಪತ್ರದಲ್ಲಿ ಈ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಇನ್ನು ಈಗಾಗಲೇ ದೇವಸ್ಥಾನ, ಚರ್ಚ್, ಮಸೀದಿಗಳು ಜೂನ್ 1 ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ದೇವಾಲಯದಲ್ಲಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆಯೂ ಕೇಂದ್ರಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.
ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಪ್ರೊ ಸಹಾಯದಿಂದ ಸ್ಥಾಪನೆಯಾಗಿರುವ ಸ್ಮಾರ್ಟ್ ಕಿಯೋಸ್ಕ್ ಕೇಂದ್ರಗಳಿಗೆ ಭೇಟಿ ನೀಡಿದ್ದು 15 ಕಡೆ ಸ್ಮಾರ್ಟ್ ಕಿಯೊಸ್ಕ್ ಗಳನ್ನು ಸ್ಥಾಪನೆ ಮಾಡಲಿದ್ದೇವೆ. ಇದರಿಂದಾಗಿ ಕೊರೊನಾ ಪರೀಕ್ಷೆಯನ್ನು ಅಧಿಕ ಮಾಡಬಹುದಾಗಿದೆ ಎಂದು ತಿಳಿಸಿದ ಅವರು ಬೆಂಗಳೂರು ಕೊರೊನಾ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.