ಬೆಂಗಳೂರು, ಮೇ 27 (Daijiworld News/MB) : ರಾಜ್ಯ ಸರ್ಕಾರವು ಯಲಹಂಕ ಮೇಲ್ಸೇತುವೆಗೆ ವಿ.ಡಿ ಸಾವರ್ಕರ್ ಅವರ ಹೆಸರನ್ನಿಡಲು ನಿರ್ಧಾರ ಮಾಡಿದ್ದು ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ಧರಾಮಯ್ಯನವರು ಯಲಹಂಕ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ರಾಜ್ಯದ ಸ್ವಾತಂತ್ರ್ಯಹೋರಾಟಗಾರರೊಬ್ಬರ ಹೆಸರಿಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರ ಅಲ್ಲ ಎನ್ನುವುದಕ್ಕೆ ಯಲಹಂಕ ಮೇಲ್ಸೆತುವೆಗೆ ಸಾವರ್ಕರ್ ಹೆಸರಿಡುವ ಅವಸರದ ನಿರ್ಧಾರವೇ ಪುರಾವೆ. ಕರ್ನಾಟಕದ ಮುಖ್ಯಮಂತ್ರಿ ಅವರೇ, ನೀವು ವಿರೋಧ ಪಕ್ಷಗಳ ಸಹಕಾರ ಬಯಸುತ್ತಿರುವುದು ಇಂತಹ ಜನವಿರೋಧಿ ನಿರ್ಧಾರಗಳಿಗಾಗಿಯೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯಪೂರ್ವ ಮತ್ತು ನಂತರ ನಾಡಿನ ಅಭಿವೃದ್ಧಿಗೆ ಮತ್ತು ಹಿತಕ್ಕಾಗಿ ದುಡಿದ ಹಲವು ಮಹನೀಯರಿದ್ದಾರೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಡಬಹುದಿತ್ತು. ರಾಜ್ಯದ ಹೋರಾಟಗಾರರ ಹೆಸರನ್ನು ಬೇರೆ ರಾಜ್ಯಗಳಲ್ಲಿ ನಾಮಕರಣ ಮಾಡುವುದುಂಟೆ? ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ನಾಡಿನ ಜನತೆಯ ಪರವಾಗಿ ಆಗ್ರಹ ಪಡಿಸುತ್ತೇನೆ ಎಂದಿದ್ದಾರೆ.