ನವದೆಹಲಿ, ಮೇ 27 (DaijiworldNews/SM): ದೇಶವನ್ನೇ ಕೊವಿಡ್-19 ಸೋಂಕು ಕಾಡಿದೆ. ಹಲವಾರು ಜನ ಸಂಕಷ್ಟದಲ್ಲಿದ್ದಾರೆ. ಹೀಗಿರುವ ಸಂದರ್ಭದಲ್ಲಿ, ರೋಗಿಗಳಿಗೆ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬಹುದಾದ ಖಾಸಗಿ ಆಸ್ಪತ್ರೆಗಳನ್ನು ಗುರುತಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ದೇಶಾದ್ಯಂತದ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ಚಿಕಿತ್ಸೆಯ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದೆ.
ಹಲವು ಖಾಸಗಿ ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರ ಭೂಮಿಯನ್ನು ಉಚಿತವಾಗಿ ಅಥವಾ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗಿದೆ. ಈಗ ಅಂತಹ ಆಸ್ಪತ್ರೆಗಳು ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದಿದೆ.
ಆಸ್ಪತ್ರೆಗಾಗಿ ಉಚಿತ ಅಥವಾ ಕಡಿಮೆ ದರಕ್ಕೆ ಭೂಮಿ ಪಡೆದ ಚಾರಿಟೇಬಲ್ ಆಸ್ಪತ್ರೆಗಳನ್ನು ಸರ್ಕಾರ ಗುರುತಿಸಬೇಕು ಎಂದು ಸುಪ್ರೀಂ ಕೋರ್ಟ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.