ಬೆಂಗಳೂರು, ಮೇ 28 (Daijiworld News/MB) : ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯ ತೀವ್ರತೆ ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇದೇ 28ರಿಂದ ಜೂನ್ 1ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದ್ದು, ಮೇ 28ರಿಂದ ಜೂ.1ರವರೆಗೆ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.
ಇನ್ನು ಮೇ 31ರಿಂದ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬುಧವಾರ ಹಾಸನ ಜಿಲ್ಲೆಯ ನುಗ್ಗೇಹಳ್ಳಿಯಲ್ಲಿ 4 ಸೆಂ.ಮೀ.ಮಳೆಯಾಗಿದೆ. ಮಾಲೂರು, ಹೊಸಕೋಟೆ, ಬೆಂಗಳೂರು 3, ಕೆ.ಆರ್.ಪೇಟೆ, ಬೆಳ್ಳೂರು 2, ಕೋಲಾರ, ಚಾಮರಾಜನಗರ, ಮದ್ದೂರು, ಪಿರಿಯಾಪಟ್ಟಣ, ಬಂಗಾರಪೇಟೆ, ಚಿತ್ರದುರ್ಗ, ದೊಡ್ಡಬಳ್ಳಾಪುರ, ಕೊಳ್ಳೇಗಾಲದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಮೈಸೂರು ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ ಧಾರಾಕಾರ ಮಳೆಯಾಗಿದೆ. ಕೆ.ಆರ್.ನಗರದ ಬೀಚನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಗೆ ಬಾಳೆತೋಟ ಹಾನಿಯಾಗಿದೆ.
ಇನ್ನು ಕಲಬುರ್ಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಮಡಿಕೇರಿಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.