ತೆಲಂಗಾಣ, ಮೇ 28 (Daijiworld News/MSP): ಕೊಳೆವೆ ಬಾವಿಗೆ ಮಕ್ಕಳು ಬಿದ್ದು ಮೃತಪಡುವ ದುರಂತಗಳು ಕೊನೆಯಾಗುತ್ತನೇ ಇಲ್ಲ. ಮೆಡಕ್ ಜಿಲ್ಲೆಯ ಪಪನ್ನ್ ಪೇಟೆ ಹೋಬಳಿಯ ಪೊಡಿಚನ್ ಪಲ್ಲಿ ಗ್ರಾಮದಲ್ಲಿ ಬುಧವಾರ ಸಂಜೆ ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಮಗು ಸಂಜಯ್ ಸಾಯಿವರ್ಧನ್ ಇಂದು ನಸುಕಿನ ಜಾವ ಹೊರತೆಗೆಯಲಾಗಿದ್ದು ಬಾಲಕ ಮೃತಪಟ್ಟಿದ್ದಾನೆ.
ಬಾಲಕನ ಶವ 25 ಅಡಿ ಆಳದಲ್ಲಿ ಪತ್ತೆಯಾಗಿದೆ. ಮೂರು ವರ್ಷದ ಬಾಲಕ ಬುಧವಾರ ಸಂಜೆ ತನ್ನ ಅಜ್ಜನೊಂದಿಗೆ ತೋಟದ ಮನೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕೊಳವೆ ಬಾಯಿಯಲ್ಲಿ ಬಿದ್ದಿದ್ದ. ಕೂಡಲೇ ತಾಯಿ ನವೀನಾ ಆಗಮಿಸಿ ತಾನು ಉಟ್ಟಿದ್ದ ಸೀರೆಯನ್ನು ಕಳಚಿ ಕೊಳವೆ ಬಾವಿಯೊಳಗೆ ಇಳಿಸಿ ಮಗು ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಪ್ರಯತ್ನಪಟ್ಟಿದ್ದಳು.
ಹೈದರಾಬಾದ್ ಮತ್ತು ಗುಂಟೂರಿನಿಂದ ಬಂದಿದ್ದ ಎನ್ ಡಿಆರ್ ಎಫ್ ತಂಡದ 25ಕ್ಕೂ ಹೆಚ್ಚು ಸಿಬ್ಬಂದಿ ಸತತ 12 ಗಂಟೆ ಕಾರ್ಯಾಚರಣೆಯ ಶ್ರಮ ಮತ್ತು ಎಲ್ಲರ ಪ್ರಾರ್ಥನೆ ಫಲಿಸಲಿಲ್ಲ.
ಬಾಲಕ 25 ಅಡಿ ಆಳದಲ್ಲಿರಬಹುದೆಂದು ಭಾವಿಸಿ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ಅಗೆಯಲಾಯಿತು. ಆದರೆ ಆಗಲೇ ಮಗು ಪ್ರಾಣ ಕಳೆದುಕೊಂಡಿತ್ತು. ಈ ದುರಂತ ಘಟನೆಯಲ್ಲಿ ಬಾಲಕನ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.ಗದ್ದೆಯಲ್ಲಿ ಬೋರ್ ವೆಲ್ ಕೊರೆಸಿ ಅದನ್ನು ಮುಚ್ಚದೆ ಹಾಗೆ ಬಿಟ್ಟಿದ್ದ ಬಾಲಕನ ತಾತ ಮಂಗಲಿ ಭಿಕ್ಷಾಪತಿ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಮೆಡಕ್ ಜಿಲ್ಲಾಧಿಕಾರಿ ಕೆ ಧರ್ಮ ರೆಡ್ಡಿ ತಿಳಿಸಿದ್ದಾರೆ.