ಶ್ರೀನಗರ, ಮೇ 28 (Daijiworld News/MB) : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ 2019 ರಲ್ಲಿ ದಾಳಿ ನಡೆಸಿದಂತೆ ಮತ್ತೊಮ್ಮೆ ದಾಳಿ ನಡೆಸಲು ಉಗ್ರರು ಸಂಚು ನಡೆಸಿದ್ದು ಅದನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಸುಮಾರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಅಧಿಕ ತೂಕದ ಸುಧಾರಿತ ಸ್ಫೋಟಕ ಸಾಧನ (ಐಟಿಡಿ) ಹೊತ್ತು ಸಾಗುತ್ತಿದ್ದ ವಾಹನವನ್ನು ಭದ್ರತಾ ಪಡೆಗಳು ತಡೆದಿದ್ದು, ಭಾರೀ ಅನಾಹುತ ತಪ್ಪಿದೆ.
ಇಂದು ಬೆಳಿಗ್ಗೆ ನಕಲಿ ನೋಂದಣಿ ಸಂಖ್ಯೆ ಹೊಂದಿದ್ದ ಕಾರು ಚೆಕ್ಪಾಯಿಂಟ್ನಲ್ಲಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಲಾಗಿದ್ದು ಆದರೆ ಆತ ಕಾರು ನಿಲ್ಲಿಸದೆ ಮತ್ತಷ್ಟು ವೇಗವಾಗಿ ಕಾರು ಚಲಾಯಿಸಿದ್ದಾನೆ. ಭದ್ರತಾ ಪಡೆಗಳು ಈ ವೇಳೆ ಗುಂಡು ಹಾರಿಸಿದ್ದು ಆತ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ ಕುಮಾರ್ ತಿಳಿಸಿದ್ದಾರೆ.
ದಾಳಿ ನಡೆಯಲು ಯತ್ನ ನಡೆಸುತ್ತಿರುವ ಬಗ್ಗೆ ಗುಪ್ತಚರ ದಳ ಮಾಹಿತಿ ನೀಡಿದ್ದು ನಾವೂ ಕೂಡಾ ಐಇಡಿ ತುಂಬಿದ್ದ ವಾಹನವನ್ನು ಎದುರು ನೋಡುತ್ತಿದ್ದೆವು. ಈಗ ಐಇಡಿಯನ್ನು ಜೋಪಾನವಾಗಿ ಕಾರಿನಿಂದ ಹೊರಗೆ ತೆಗೆದಿದ್ದು, ಬಾಂಬ್ ನಿಷ್ಕ್ರಿಯ ದಳ ಅದನ್ನು ನಿಷ್ಕ್ರಿಯಗೊಳಿಸಿದೆ. ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಅರೆ ಸೇನಾಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು ಎಂದು ಅವರು ತಿಳಿಸಿದ್ದಾರೆ.
ಇನ್ನು ಬಾಂಬ್ ನಿಷ್ಕ್ರಿಯಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದೆ. ಬಾಂಬ್ ನಿಷ್ಕ್ರಿಯಗೊಳಿಸುವಾಗ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
2019ರ ಫೆಬ್ರವರಿ ತಿಂಗಳಿನಲ್ಲಿ ಪುಲ್ವಾಮ ಜಿಲ್ಲೆಯಲ್ಲಿ ಆತ್ಮಾಹುತಿ ಐಇಡಿ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್'ಪಿಎಫ್)ಯ 41 ಯೋಧರು ಹುತಾತ್ಮರಾಗಿದ್ದರು.