ಭುವನೇಶ್ವರ್, ಮೇ 28 (DaijiworldNews/PY) : ಪ್ರೀತಿಸಿ ಓಡಿಹೋದ ಜೋಡಿಯೊಂದು ಕ್ವಾರಂಟೈನ್ ಕೇಂದ್ರದಲ್ಲಿ ಮದುವೆಯಾದ ಘಟನೆ ಒಡಿಶಾದಲ್ಲಿ ನಡೆದಿದೆ.
ಪುರಿ ಜಿಲ್ಲೆಯ ಸಗದ ಗ್ರಾಮದ ಸೌರಭ್ ದಾಸ್(19) ಭಾನುವಾರ ತನ್ನ ಪ್ರಿಯತಮೆ ಪಿಂಕ್ಯಾರಾಣಿ ದಾಸ್ಳನ್ನು 14 ದಿನಗಳ ಕ್ವಾರಂಟೈನ್ ಮುಗಿಸಿ ಕ್ವಾರಂಟೈನ್ ಕೇಂದ್ರದಲ್ಲೇ ವಿವಾಹವಾಗಿದ್ದಾನೆ. ಈ ಜೋಡಿ ಕಳೆದ ಜನವರಿ ತಿಂಗಳಿನಲ್ಲಿ ಓಡಿಹೋಗಿದ್ದು ಅಹಮದಾಬಾದ್ನಲ್ಲಿ ನೆಲೆಸಿದ್ದರು. ಆದರೆ, ಯುವತಿಯ ಕುಟುಂಬಸ್ಥರು ಯುವಕನ ಮೇಲೆ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ.
ಸೌರಭ್ ದಾಸ್ ಅಹಮದಾಬಾದ್ನಲ್ಲಿ ಪ್ಲಾಸ್ಟಿಕ್ ಫಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆದರೆ, ಲಾಕ್ಡೌನ್ ಆದ ಕಾರಣ ಕೆಲಸ ಇರಲಿಲ್ಲ. ಹಾಗಾಗಿ ಇಬ್ಬರೂ ತಮ್ಮ ಊರಿಗೆ ಮರಳಲು ಕಷ್ಟಪಡುತ್ತಿದ್ದರು. ಕೊನೆಗೆ ಹೇಗೋ ತಮ್ಮ ಗ್ರಾಮಕ್ಕೆ ವಾಪಾಸ್ಸಾಗಿದ್ದು, ಈ ಸಂದರ್ಭ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.
ಅಹಮದಾಬಾದ್ನಿಂದ ಮೇ 10 ರಂದು ಊರಿಗೆ ಮರಳಿದ್ದ ಜೋಡಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಅಲ್ಲದೇ ಈ ವೇಳೆ ಅವರಿಬ್ಬರಲ್ಲೂ ಕೊರೊನಾ ಲಕ್ಷಣ ಕಂಡುಬಂದರೂ ಗಂಟಲ ದ್ರವ ಪರೀಕ್ಷೆಯಲ್ಲಿ ಮಾತ್ರ ನೆಗಟಿವ್ ವರದಿ ಬಂದಿತ್ತು. ಅದಾಗಲೇ ಯುವತಿಯು ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆ ಅವರಿಬ್ಬರಿಗೂ ವಿವಾಹ ಮಾಡಿವುದಾಗಿ ತೀರ್ಮಾನ ಮಾಡಲಾಗಿತ್ತು. ಹಾಗಾಗಿ ಮೇ 24 ಅಂದರೆ ಅವರ ಕ್ವಾರಂಟೈನ್ನ ಅವಧಿ ಮುಗಿದ ಕೂಡಲೇ ಅವರಿಬ್ಬರಿಗೂ ಸಗದ ಕ್ವಾರಂಟೈನ್ ಕೇಂದ್ರದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು ಎಂದು ಅಧಿಕಾರಿ ಮನೋಜ್ ಬೆಹೇರಾ ಹೇಳಿದ್ದಾರೆ.