ಬೀದರ್, ಮೇ 28 (Daijiworld News/MB) : ಪಂಜಾಬ್, ಹರ್ಯಾಣ, ರಾಜಸ್ಥಾನ ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲಿ ಡೆಸರ್ಟ್ ಲೋಕಸ್ಟ್ ಮಿಡತೆ ಹಾವಳಿ ಉಂಟಾಗಿದ್ದು ಇನ್ನು ಕರ್ನಾಟಕಕ್ಕೂ ಈ ದಂಡು ಬರುವ ಸಾಧ್ಯತೆಯಿದ್ದು ರೈತರಲ್ಲಿ ಆತಂಕ ಮನೆಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೀದರ್ ಜಿಲ್ಲಾಧಿಕಾರಿ ಎಚ್.ಆರ್. ಮಹದೇವ್, ನಾಗ್ಪುರದಲ್ಲಿ ಮಿಡತೆಗಳ ಹಿಂಡು ಇರುವ ಬಗ್ಗೆ ಸರ್ಕಾರದಿಂದಲೇ ಮಾಹಿತಿ ದೊರೆತಿದ್ದು ಬೀದರ್ ಜಿಲ್ಲೆಗೂ ಈ ಮಿಡತೆ ದಂಡು ಬರುವ ಸಾಧ್ಯತೆಯಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸರಣಿ ರೂಪದ ಎರಡು ಸಭೆ ನಡೆಸಿದ್ದಾರೆ.
ಇನ್ನು ಈ ಮಿಡತೆ ದಾಳಿಯಿಂದಾಗಿ ಕಂಗಾಲಾಗಿರುವ ರಾಜಸ್ತಾನ ಮಿಡತೆ ಹಾವಳಿ ತಡೆಗೆ ನವೀನ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದು ಡ್ರೋನ್ಗಳನ್ನು ಬಳಕೆ ಮಾಡಿಕೊಂಡಿದ್ದಾರೆ.
ಇದಕ್ಕಾಗಿಯೇ ವಿಶೇಷ ಡ್ರೋನ್ಗಳನ್ನು ಕೇಂದ್ರ ಕೃಷಿ ಸಚಿವಾಲಯ ಸಿದ್ಧಪಡಿಸಿದ್ದು ಈ ಡ್ರೋನ್ಗಳ ಮೂಲಕ 10 ಮೀಟರ್ ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ. ಹಾಗೆಯೇ ಮಿಡತೆಯನ್ನು ಚದುರಿಸಲು ಈ ಡ್ರೋನ್ನಲ್ಲಿ ಶಬ್ಧವನ್ನು ಅಳವಡಿಸಲಾಗಿದೆ.
ಇನ್ನು ಮಿಡತೆ ಹಾವಳಿ ತಡೆಗೆ ಡ್ರೋನ್ ಬಳಸುವ ವಿನೂತನ ಪ್ರಯತ್ನ ಮುಕ್ತ ಪ್ರದೇಶದಲ್ಲಿ ಹಾಗೂ ಟ್ಯ್ರಾಕ್ಟರ್ ತಲುಪಲಾಗದ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.