ಬೆಂಗಳೂರು, ಮೇ 28 (DaijiworldNews/PY) : ಪಕ್ಷಾಂತರ ಕಾಯ್ದೆಗೆ ಸಂಬಂಧಪಟ್ಟಂತೆ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ಲಭ್ಯವಿರುವ ಅಧಿಕಾರ, ರಚಿಸಲಾಗಿರುವ ನಿಯಮಗಳ ಮರುಪರಿಶೀಲನೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಯಲಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅರುವತ್ತು ವರ್ಷಗಳಿಂದ ಪಕ್ಷಾಂತರ ನಿಷೇಧ ಕಾಯ್ದೆ ಸುಧಾರಣೆ ಮಾಡಲು ನಿರಂತರವಾಗಿ ಹಲವಾರು ತಿದ್ದುಪಡಿಗಳು, ಚರ್ಚೆಗಳು, ಮಾರ್ಪಾಡುಗಳು ನಡೆದಿವೆ. ಆದರೂ ಕೆಲವೊಂದು ಬಾರಿ ಲೋಪ ದೋಷಗಳು ಆಗುತ್ತಲೇ ಇವೆ. ಈ ಕಾರಣಕ್ಕಾಗಿ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದರು.
ಕರ್ನಾಟಕ ಹಾಗೂ ಒಡಿಶಾ ವಿಧಾನಸಭೆ ಅಧ್ಯಕ್ಷರನ್ನು ಒಳಗೊಂಡ ಮೂವರ ಅಧ್ಯಯನ ಸಮಿತಿ ರಚನೆಯಾಗಿದ್ದು, ಈಗಾಗಲೇ ರಾಜಸ್ಥಾನದಲ್ಲಿ ಒಂದು ಸಭೆ ಹಾಗೂ ವಿಚಾರ ಸಂಕಿರಣ ನಡೆದಿದೆ. ಪಕ್ಷಾಂತರ ಕಾಯ್ದೆಯನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ರಾಷ್ಟ್ರಮಟ್ಟದಲ್ಲಿ ಅಧ್ಯಯನ ಸಮಿತಿ ರಚಿಸಲಾಗಿದ್ದು, ಸಮಿತಿ ವತಿಯಿಂದ ಸಾರ್ವಜನಿಕರು ಹಾಗೂ ವಿಷಯ ಪರಿಣತರಿಂದ ಅಭಿಪ್ರಾಯ ಆಹ್ವಾನಮಾಡಲಾಗಿದೆ ಎಂದು ತಿಳಿಸಿದರು.
ಜೂ. 10ರೊಳಗೆ ಪಕ್ಷಾಂತರ ತಿದ್ದುಪಡಿ ಕಾಯ್ದೆ ಸುಧಾರಣೆ ಸಂಬಂಧ ಸಾರ್ವಜನಿಕರು, ತಜ್ಞರು, ಆಸಕ್ತರು ಲಿಖಿತ ಸಲಹೆ, ಸೂಚನೆ, ಇ-ಮೇಲ್ ಮೂಲಕ ವಿಧಾನಸಭೆ ಕಾರ್ಯದರ್ಶಿಗೆ ಕಳುಹಿಸಬಹುದಾಗಿದೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.