ಬೆಂಗಳೂರು, ಮೇ 28 (Daijiworld News/MSP): ಕಾಂಗ್ರೆಸ್ ಪಕ್ಷಕ್ಕೆ ನೆಹರು ಕುಟುಂಬವನ್ನು ಹೊಗಳುತ್ತಲೇ ಇರುವುದು ಒಂದು ಖಯಾಲಿಯಾಗಿದೆ. ಹೀಗಾಗಿಯೇ ರಸ್ತೆ ,ಉದ್ಯಾನವನ ಎಲ್ಲದಕ್ಕೂ ಅವರದೇ ಹೆಸರು. ಆಗೆಲ್ಲಾ ಇವರಿಗೆ ಕನ್ನಡಿಗರ ನೆನಪುಗಳು ಆಗೋದೆ ಇಲ್ಲಾ. ನಾವು ಬೆಂಗಳೂರಿನ ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟರೆ ಮಾತ್ರ ಕಾಂಗ್ರೆಸ್ ಗೆ ತಡೆದುಕೊಳ್ಳಲಾಗುವುದಿಲ್ಲ, ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕ್ಯಾಂಟೀನ್ ಸ್ಥಾಪನೆ ಮಾಡುವಾಗ ಇಂದಿರಾ ಗಾಂಧಿ ಹೆಸರಿಡುವ ಮೊದಲು ಕನ್ನಡಿಗರ ಹೆಸರು ಕಾಣಲಿಲ್ಲವೇ? ದೇಶದ ಬಹುತೇಕ ಕಡೆ ಕಾಂಗ್ರೆಸ್ ಪಕ್ಷ ಬೀದಿ, ಪಾರ್ಕ್ಗಳಿಗೆ ರಾಜೀವ್ ಗಾಂಧಿ, ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಎಂದೇ ಹೆಸರಿಡುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ. ಆದ್ರೆ ಇದೀಗ ರಾಜ್ಯ ಸರ್ಕಾರ ಯಲಹಂಕದ 'ಮೇಜರ್ ಸಂದೀಪ್ ಉನ್ನಿಕೃಷ್ಣನ್' ರಸ್ತೆಯ ಪ್ಲೈ ಓವರ್ ಗೆ 'ವಿನಾಯಕ ದಾಮೋದರ ಸಾವರ್ಕರ್ ’ ಎಂದು ನಾಮಕರಣ ಮಾಡಿದರೆ ಮಾತ್ರ ಯಾಕೇ ಸಂಕಟ?" ಎಂದು ಕುಹಕವಾಡಿದ್ದಾರೆ.
ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹೆಸರು ಜಪಿಸೋದು ಮಾತ್ರ ಕಾಂಗ್ರೆಸ್ ಗೊತ್ತು. ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ಸಹಿಸಲಿಲ್ಲ. ಈಗ ವೀರ್ ಸಾವರ್ಕರ್ ಹೆಸರು ಸಹಿಸುಕೊಳ್ಳುತ್ತಾರಾ? ಕ್ಯಾಂಟಿನ್ ಹೆಸರಿಡುವಾಗಲು ಇಂದಿರಮ್ಮ ಹೆಸರು ಮಾತ್ರ ಸಿದ್ದರಾಮಯ್ಯ ಕಾಣಿಸಿದೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡರೆ ನಿಮಗೆ ಉಳಿಗಾಲವಿದೆ. ಇಲ್ಲದಿದ್ದರೆ ನಿರ್ಣಾಮ ಆಗಿಬಿಡುತ್ತೀರಾ ಎಂದು ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.