ಶ್ರೀನಗರ, ಮೇ 28 (DaijiworldNews/PY) : ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಆದಿಲ್ ಹೆಸರಿನ ಯುವಕ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೂ ಸಂಪರ್ಕ ಹೊಂದಿದ್ದಾನೆ. ಈ ಕೃತ್ಯವನ್ನು ನಡೆಸಲು ಅವನೇ ಮುಂದಾಗಿದ್ದಾನೆಂಬ ಅನುಮಾನವಿದೆ ಎಂದು ಜಮ್ಮು-ಕಾಶ್ಮೀರ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದಾಳಿಯನ್ನು ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ನಡೆಸಲಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ಆದಿಲ್ ಹೆಸರಿನ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರ ಪುಲ್ವಾಮ ಮಾದರಿಯ ಆತ್ಮಹತ್ಯಾ ದಾಳಿಗೆ ಮುಂದಾಗಿದ್ದನೆಂಬ ಅನುಮಾನವಿದೆ ಎಂದು ತಿಳಿಸಿದ್ದಾರೆ.
ಆತ ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಉದ್ದೇಶ ಹೊಂದಿದ್ದ. ಈ ಹಿನ್ನೆಲೆ 40-45 ಕೆ.ಜಿ ಸುಧಾರಿತ ಸ್ಫೋಟಕಗಳನ್ನು ಹೊತ್ತಿದ್ದ ಕಾರನ್ನು ಚಲಾಯಿಸುತ್ತಿದ್ದನೆಂಬ ಅನುಮಾನವಿದೆ. ಹಾಗಾಗಿ ನಾವು ಹೊರಗಿನಿಂದ ತಜ್ಞರ ತಂಡಗಳನ್ನು ಕರೆಸಿಕೊಂಡು ಪರಿಶೀಲನೆ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
2019ರಲ್ಲಿ ನಡೆದ ಪುಲ್ವಾಮ ಮಾದರಿಯ ಮತ್ತೊಂದು ಉಗ್ರರ ದಾಳಿಯ ಸಂಚನ್ನು ಭಾರತೀಯ ಸೇನೆ, ಅರೆ ಸೇನಾಪಡೆ ಹಾಗೂ ಪೊಲೀಸರು ಗುರುವಾರ ವಿಫಲಗೊಳಿಸಿವೆ.