ಬೆಂಗಳೂರು, ಮೇ 28 (Daijiworld News/MSP): ದೇಶದಲ್ಲಿ ಮೇ.31 ರಂದು ನಾಲ್ಕನೇ ಹಂತದ ಲಾಕ್ಡೌನ್ ಅಂತ್ಯಗೊಳ್ಳಲಿದೆ. ಹೀಗಾಗಿ ೫ನೇ ಹಂತದ ಲಾಕ್ ಡೌನ್ ಘೋಷಿಸಿದ್ರೂ ನಿಯಮಗಳು ಇನ್ನಷ್ಟು ಸರಳವಾಗುವ ಸಾಧ್ಯತೆ ಇದೆ. ಈ ನಡುವೆ ಆದರೆ, ಜೂನ್ 1ರ ನಂತರವೂ ಜಿಮ್ ಮತ್ತು ರೆಸ್ಟೋರೆಂಟ್ ತೆರೆಯುವುದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಈ ಮೂಲಕ ಜಿಮ್, ರೆಸ್ಟೋರೆಂಟ್ ಮಾಲೀಕರಿಗೆ ಮತ್ತೆ ನಿರಾಸೆಯಾಗಿದೆ.
ಈ ಹಿಂದೆ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಹೋಟೆಲ್ ಉದ್ಯಮ ಸಿಲುಕಿದೆ. ಆದರೂ ಹೋಟೆಲ್ ಮಾಲೀಕರು ಸಿಬ್ಬಂದಿಗಳಿಗೆ 2-3 ತಿಂಗಳಿನಿಂದಲೂ ವೇತನ ಕೊಟ್ಟು ಸಲಹುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಸಂಕಟ ಹೇಳಿಕೊಂಡಿದ್ದಾರೆ. ಮೇ 31ಕ್ಕೆ ನಾಲ್ಕನೇ ಹಂತ ಲಾಕ್ಡೌನ್ ಅವಧಿ ಮುಗಿಯಲಿದೆ. ಹೀಗಾಗಿ ಜೂ.1 ರ ಬಳಿಕ ಸಿಎಂ ಹೋಟೆಲ್ ಡೈನಿಂಗ್ ಗೆ ಅವಕಾಶ ಮಾಡಿಕೊಡ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದರು.
ಆದರೆ ಇಂದು ಕಂದಾಯ ಸಚಿವ ಆರ್ ಅಶೋಕ ಅವರು ಕೊರೊನಾ ವೈರಸ್ ಜತೆ ಬದುಕುವುದು ಅನಿವಾರ್ಯವಾಗಿದೆ. ಲಾಕ್ ಡೌನ್ ಫ್ರೀಗೆ ಸರ್ಕಾರ ಮುಕ್ತ ಮನಸ್ಸಿನಿಂದ ಇದೆ. ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿದೆ. ವೈರರಸ್ ನಿಯಂತ್ರಣಕ್ಕೂ ಹೆಚ್ಚು ಒತ್ತು ನೀಡಬೇಕಾಗಿದೆ. ಕೇಂದ್ರ ಸರ್ಕಾರದ ಸೂಚನೆ ಏನೆಂಬುದನ್ನು ನಾವು ಕಾಯುತ್ತಿದ್ದೆವೆ ಆದರೆ ಜೂನ್ 1ರ ಬಳಿಕ ಹೋಟೆಲ್ ಗಳು ಓಪನ್ ಆಗಬಹುದು. ಜಿಮ್ ತೆರೆಯುವುದಿಲ್ಲ. ಬಾರ್ ಆಂಡ್ ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ ಎಂದು ವಿಧಾನ ಸೌಧದಲ್ಲಿ ಹೇಳಿಕೆ ನೀಡಿದ್ದು ಈ ಮೂಲಕ ಜಿಮ್ ಹಾಗೂ ಹೊಟೇಲ್ ಉದ್ಯಮಿಗಳ ಆಸೆಗೆ ತಣ್ಣೀರೆರಚಿದ್ದಾರೆ.