ನವದೆಹಲಿ, ಮೇ 29 (DaijiworldNews/PY) : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ಕೇರಳಕ್ಕೆ ಜೂನ್ 1ರಂದೇ ನೈರುತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ತಿಳಿಸಿದೆ.
ಮೇ 31ರಿಂದ ಜೂನ್ 4ರವರೆಗೆ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಲಿದ್ದು, ನೈರುತ್ಯ ಮುಂಗಾರು ಮಾರುತಗಳ ಪ್ರವೇಶಕ್ಕೆ ಇದು ಅನುಕೂಲವಾದ ವಾತಾವರಣ ಕಲ್ಪಿಸಲಿದೆ. ಈ ವರ್ಷದಂದು ಮುಂಗಾರಿನಲ್ಲಿ ವಾಡಿಕೆಯ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಕೇರಳಕ್ಕೆ ಜೂನ್ 5ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮೇ 15ರಂದು ಐಎಂಡಿ ತಿಳಿಸಿತ್ತು. ಆದರೆ, ಮೇಲ್ಮೈ ಸುಳಿಗಾಳಿ ಪ್ರಭಾವದಿಂದಾಗಿ ಮುಂಗಾರು ಮಾರುತಗಳು ಚುರುಕಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.