ನವದೆಹಲಿ, ಮೇ 29 (Daijiworld News/MSP): ದೇಶಾದ್ಯಂತ ಐದನೇ ಹಂತದ ಲಾಕ್ ಡೌನ್ ಘೋಷಿಸುವುದಾದರೆ ಅದರ ಸ್ವರೂಪ ಹೇಗಿರಬೇಕು, ಅಥವಾ ವಿಸ್ತರಣೆ ಮಾಡುವುದು ಬೇಡವೇ ಎಂಬಿತ್ಯಾದಿಗಳ ಬಗ್ಗೆ ತಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ನೀಡುವಂತೆ ಕೇಂದ್ರ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಳಿದ್ದಾರೆ.
ದೇಶಾದ್ಯಂತ ನಾಲ್ಕನೇ ಹಂತದ ಲಾಕ್ ಡೌನ್ ಮುಗಿಯುವುದಕ್ಕೆ ಇನ್ನೆರಡು ದಿನಗಳಷ್ಟೇ ಉಳಿದುಕೊಂಡಿದೆ. ಹೀಗಾಗಿ ದೂರವಾಣಿ ಮೂಲಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಾತನಾಡಿದ ಅವರು ಲಾಕ್ ಡೌನ್ ವಿಚಾರವಾಗಿ ಮಾತನಾಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸಾಂಕ್ರಮಿಕ ರೋಗ ವಿರುದ್ದ ನಿಯಂತ್ರಣ ಸಾಧಿಸುವ ಹೋರಾಟದಲ್ಲಿ ಆಯಾ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಅಲ್ಲಿನ ಸರ್ಕಾರಗಳು ತೆಗೆದುಕೊಳ್ಳುವ ತೀರ್ಮಾನಗಳು ಅತಿಮುಖ್ಯವಾಗಿರುತ್ತದೆ.
ಕೊರೋನಾ ವೈರಸ್ ನ್ನು ತಡೆಗಟ್ಟಲು ಮೊದಲ ಬಾರಿಗೆ ಮಾರ್ಚ್ 25ರಂದು ಮೊದಲ ಬಾರಿಗೆ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆ ಬಳಿಕ ಮೂರು ಬಾರಿ ವಿಸ್ತರಿಸಲಾಗಿತ್ತು. ನಾಲ್ಕನೇ ಹಂತದ ಲಾಕ್ ಡೌನ್ ಮೇ.31 ರಂದು ಮುಕ್ತಾಯಗೊಳ್ಳಲಿದೆ.