ಕೋಯಿಕ್ಕೋಡ್, ಮೇ 29 (DaijiworldNews/PY) : ರಾಜ್ಯಸಭಾ ಸದಸ್ಯ ಎಂ.ಪಿ.ವಿವೀರೇಂದ್ರ ಕುಮಾರ್ (84) ಗುರುವಾರ ತಡರಾತ್ರಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ವೀರೇಂದ್ರ ಕುಮಾರ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಘದೇ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ವಯನಾಡ್ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಪತ್ನಿ, ಮೂವರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.
ವೀರೇಂದ್ರ ಕುಮಾರ್ ಅವರು, ಪಿಟಿಐ ಸುದ್ದಿಸಂಸ್ಥೆಯ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದು, ಮೂರು ಬಾರಿ ಅಧ್ಯಕ್ಷರೂ ಆಗಿದ್ದರು. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಕೇರಳದ ಮಾತೃಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ವೀರೇಂದ್ರ ಕುಮಾರ್ ಅವರು 1987ರಲ್ಲಿ ಕೇರಳ ವಿಧಾನಸಭೆಗೆ ಆಯ್ಕೆಯಾಗಿ ಎರಡು ಬಾರಿ ಲೋಕಸಭೆಗೂ ಆಯ್ಕೆಯಾಗಿದ್ದರು. 2018ರಲ್ಲಿ ಕೇರಳದಿಂದ ಎಡಪಕ್ಷ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ವೀರೇಂದ್ರ ಕುಮಾರ್ ಅವರ ನಿಧನಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರು ಸಂತಾಪ ಸೂಚಿಸಿದ್ದಾರೆ.