ನವದೆಹಲಿ, ಮೇ 29 (DaijiworldNews/PY) : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವುದೇ ವಿಚಾರವಾಗಿ ಮಾತುಕತೆ ನಡೆಸಿಲ್ಲ ಎಂದು ಸರ್ಕಾರಿ ಮೂಲಗಳು ಶುಕ್ರವಾರ ತಿಳಿಸಿವೆ.
ಈ ಬಗ್ಗೆ ಸೃಷ್ಠೀಕರಣವೆಂಬಂತೆ, ಪ್ರಧಾನಿ ಮೋದಿ ಹಾಗೂ ಟ್ರಂಪ್ ಅವರ ನಡುವಿನ ಕೊನೆಯ ಸಂಭಾಷಣೆಯು ಎಪ್ರಿಲ್ 4 ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ವಿಷಯದ ಬಗ್ಗೆ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದೆ.
ಮಂಗಳವಾರ ಟ್ರಂಪ್ ಅವರು, ಗಡಿ ವಿವಾದವನ್ನು ಬಗೆಹರಿಸಲು ಭಾರತ ಹಾಗೂ ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಸ್ತಾಪಿಸಿದ್ದರು.
ಪ್ರಧಾನಿ ಮೋದಿ ಅವರೊಂದಿಗೆ ಪೂರ್ವ ಲಡಾಕ್ನಲ್ಲಿ ಚೀನಾ-ಭಾರತ ಗಡಿರೇಖೆ ಬಗ್ಗೆ ಮಾತನಾಡಿದ್ದೇನೆ. ಚೀನಾ ವಿಚಾರವಾಗಿ ಪ್ರಧಾನಿ ಮೋದಿ ಅವರ ಮನಸ್ಥಿತಿ ಉತ್ತಮವಾಗಿಲ್ಲ ಎಂದು ವಾಷಿಂಗ್ಟನ್ನಲ್ಲಿ ಟ್ರಂಪ್ ಹೇಳಿದ್ದರು.
ಭಾರತವು ಸಮಸ್ಯೆಯನ್ನು ಪರಿಹರಿಸಲು ರಾಜತಾಂತ್ರಿಕ ಕಾರ್ಯವಿಧಾನಗಳ ಮೂಲಕ ನೇರವಾಗಿ ಚೀನಾದೊಂದಿಗೆ ಸಂಪರ್ಕದಲ್ಲಿ ಇದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.