ಬೆಂಗಳೂರು, ಮೇ 29 (Daijiworld News/MSP): ಅತೃಪ್ತರ ಆಟಕ್ಕೆ ಸೊಪ್ಪು ಹಾಕದಿರಲು ತೀರ್ಮಾನಿಸಿದಂತಿದ್ದು, ಅತೃಪ್ತ ಶಾಸಕರ ಜತೆ ಯಾವುದೇ ರೀತಿಯ ಮಾತುಕತೆ ಹಾಗೂ ಸಂಧಾನಕ್ಕೆ ಜಗ್ಗುವುದಿಲ್ಲ ಎಂದು ಬಂಡಾಯಗಾರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಠಿಣ ಸಂದೇಶ ರವಾನಿಸಿದ್ದಾರೆ.
ಕೊರನಾ ನಿಯಂತ್ರಣ ಹಾಗೂ ಆಡಳಿತ ಚುರುಕಿಗೆ ಗಮನ ಹರಿಸಲು ಮುಂದಾಗಿರುವ ಬಿಎಸ್ ವೈ , ಅತೃಪ್ತರ ಜತೆ ಮಾತುಕತೆ ಮುಗಿದ ಅಧ್ಯಾಯ ಎನ್ನುವ ಮೇಸೇಜ್ ನೀಡಿದ್ದು ಇದಕ್ಕೆ ಹೈಕಮಾಂಡ್ ಬೆಂಬಲವೂ ಸಿಕ್ಕಿದೆ ಎನ್ನಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಳ್ಳುತ್ತಿದ್ದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಬಂಡಾಯ ಶಾಸಕರ ಅಸಮಾಧಾನ ಶಮನಕ್ಕೆ ತುರ್ತು ಸಭೆ ಕರೆದಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಇದನ್ನು ತಳ್ಳಿ ಹಾಕಿರುವ ಸಿಎಂ ಟ್ವಿಟ್ ಮೂಲಕ ಅತೃಪ್ತ ಬ್ಲಾಕ್ಮೇಲ್ ತಂತ್ರಕ್ಕೆ ಬಗ್ಗುವುದಿಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಟ್ವೀಟ್ ನಲ್ಲಿ " ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತುಸಭೆ ಕರೆದಿದ್ದೇನೆ ಎನ್ನುವ ಸುದ್ಧಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಗಮನಿಸಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಸಭೆಯನ್ನು ನಾನು ಕರೆದಿಲ್ಲ " ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸಂದರ್ಭದ ಈಗಿನ ಲೆಕ್ಕಾಚಾರದಲ್ಲಿ ತಮ್ಮ ವಿರುದ್ಧ ಭಿನ್ನಮತ ಸಾರಿದರೆ ವರಿಷ್ಠರ ಬೆಂಬಲ ಅತೃಪ್ತರಿಗೆ ಸಿಗುವುದಿಲ್ಲ ಎಂಬ ದೈರ್ಯದಲ್ಲಿ, ರಾಜ್ಯಸಭಾ ಚುನಾವಣೆಗೆ ರಮೇಶ್ ಕತ್ತಿಗೆ ಟಿಕೆಟ್ ನೀಡಬೇಕೆಂಬ ಮುಂದಿಟ್ಟುಕೊಂಡು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕ ಸಭೆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ಬೆಳ್ಳಂಬೆಳಗ್ಗೆ ತಮ್ಮ ಟ್ವಿಟರ್ನಲ್ಲಿ ನಾನು ಯಾವುದೇ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸುವುದಿಲ್ಲ. ಅದರ ಅಗತ್ಯವೂ ಇಲ್ಲ ಎನ್ನುವ ಮೂಲ ಸಂಧಾನ ಬಾಗಿಲು ಮುಚ್ಚಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.