ಕೋಲ್ಕತ್ತ, ಮೇ 29 (DaijiworldNews/PY) : ವರದಕ್ಷಿಣೆ ನಿರಾಕರಿಸಿದ ವರನಿಗೆ ವಧುವಿನ ತಂದೆ 1000 ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟ ಘಟನೆ ಕೋಲ್ಕತ್ತದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿನ ಸೂರ್ಯಕಾಂತ ಬರೀಕ್ ಹಾಗೂ ಪ್ರಿಯಾಂಕ್ ಬೇಜ್ ಅವರ ವಿವಾಹದಲ್ಲಿ ವ್ರಿಯಾಂಕ ಅವರ ತಂದೆ ಈ ರೀತಿಯಾದ ಉಡುಗೊರೆಯನ್ನು ನೀಡಿದ್ದಾರೆ.
ನಾನು ಯಾವುದೇ ಕಾರಣಕ್ಕೂ ವರದಕ್ಷಿಣೆ ಪಡೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೆ. ನಾನು ಮಂಟಪಕ್ಕೆ ಬಂದ ಸಂದರ್ಭ ಅಲ್ಲಿ ಪುಸ್ತಕಗಳ ಉಡುಗೊರೆ ಇತ್ತು ಎಂದು ಮದುಮಗ ಹೇಳಿರುವುದಾಗಿ ವರದಿ ತಿಳಿಸಿದೆ.
ಸೂರ್ಯಕಾಂತ ಅವರು ಶಾಲಾ ಶಿಕ್ಷಕರಾಗಿದ್ದು, ವರದಕ್ಷಿಣೆ ಬೇಡ ಎಂದು ಹೇಳಿದ್ದರು. ಆದರೆ, ಉಡುಗೊರೆಯಾಗಿ ಅಳಿಯನಿಗೆ ಏನಾದರು ಕೊಡಬೇಕು ಎಂದು ಪ್ರಿಯಾಂಕ ಅವರ ತಂದೆ ಯೋಚಿಸಿದ್ದರು. ಹಾಗಾಗಿ ಅಳಿಯನಿಗೆ ಸುಮಾರು 1 ಲಕ್ಷ ಮೌಲ್ಯದ 1000 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಿಯಾಂಕ ಹಾಗೂ ಸೂರ್ಯಕಾಂತ ಇಬ್ಬರೂ ಪುಸ್ತಕ ಪ್ರೇಮಿಗಳಾಗಿದ್ದಾರೆ. ವರದಕ್ಷಿಣೆ ವಿರೋಧಿಯಾಗಿರುವ ಪತಿಯನ್ನು ಪಡೆದಿರುವುದೇ ಸಂತೋಷ ಎಂದು ಪ್ರಿಯಾಂಕ ಹೇಳಿದ್ದಾರೆ. ಈ ಪುಸ್ತಕಗಳನ್ನು ಕೋಲ್ಕತ್ತಾದ ಕಾಲೇಜು ರಸ್ತೆ ಹಾಗೂ ಉದ್ಬೋದನ್ ಕಾರ್ಯಾಲಯದಿಂದ ಖರೀದಿಸಲಾಗಿತ್ತು.