ನವದೆಹಲಿ, ಮೇ 29 (DaijiworldNews/PY) : ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರಗಳ ಸುಮಾರು 100 ಜಿಲ್ಲೆಗಳ ಮೇಲೆ ಲಕ್ಷಾಂತರ ಮಿಡತೆಗಳು ದಾಳಿ ನಡೆಸಿದ್ದು, ದೇಶದ 12 ರಾಜ್ಯಗಳಿಗೆ ಮುಂದಿನ ಕೆಲವು ವಾರಗಳಲ್ಲಿ ತಲುಪಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜೂನ್ ಮಧ್ಯಭಾಗದಲ್ಲಿ ಪಾಕಿಸ್ತಾನದಿಂದ ಮತ್ತೊಂದು ಮಿಡತೆ ಸಮೂಹವು ಭಾರತವನ್ನು ಪ್ರವೇಶಮಾಡುವ ನಿರೀಕ್ಷೆಯಿದೆ. ಭಾರತದಲ್ಲಿ ಮಿಡತೆಗಳ ಚಟುವಟಿಕೆಗಳನ್ನು ಇದು ಮತ್ತಷ್ಟು ಹೆಚ್ಚಿಸಲಿದೆ. ಈಗ ದಾಳಿ ಮಾಡಿರುವ ಮರುಭೂಮಿಯ ಸಣ್ಣ-ಕೊಂಬಿನ ಮಿಡತೆ ಸಮೂಹ, ಹಾದಿಯಲ್ಲಿರುವ ಎಲ್ಲಾ ರೀತಿಯ ಆಹಾರ ಧಾನ್ಯಗಳನ್ನು ತಿನ್ನುತ್ತದೆ. ಲಕ್ಷಾಂತರ ಜನರ ಜೀವನೋಪಾಯಕ್ಕೆ ಇದು ಆತಂಕ ಒಡ್ಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಾಯಕಾರಿ ಮಿಡತೆಗಳು ಪ್ರವೇಶಿಸುವ ಸಾಧ್ಯತೆಯ ಬಗ್ಗೆ ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ, ತೆಲಂಗಾಣ ಹಾಗೂ ಕರ್ನಾಟಕದ ಅಧಿಕಾರಿಗಳು ತಮ್ಮ ಪ್ರದೇಶಗಳಿಗೆ ಎಚ್ಚರಿಕೆ ವಹಿಸಿದ್ದಾರೆ.