ಬೆಂಗಳೂರು, ಮೇ 29 (Daijiworld News/MSP): ರಾಜ್ಯದಲ್ಲಿ ಇಂದು ಮತ್ತೆ 178 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದು, ಪತ್ತೆಯಾಗಿರುವ ಸೋಂಕಿನಲ್ಲಿ ಶೇ.80ರಷ್ಟು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರೇ ಆಗಿದ್ದು, ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ದಿನೇ ದಿನೇ ತಲೆ ನೋವು ಹೆಚ್ಚಿಸಿದೆ.
ಹೊಸ 178 ಕೋವಿಡ್ ಸೋಂಕು ಪ್ರಕರಣಗಳಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆ ಕಂಡಿದೆ. ಇಂದಿನ 178 ಪ್ರಕರಣಗಳ ಪೈಕಿ 156 ಮಂದಿ ಮಹಾರಾಷ್ಟ್ರದಿಂದ ಹಿಂತಿರುಗಿದವರಾಗಿದ್ದಾರೆ.
ಯಾದಗಿರಿಯಲ್ಲಿ 60, ರಾಯಚೂರು 62, ರಾಜಧಾನಿ ಬೆಂಗಳೂರಿನಲ್ಲಿ 10, ಉಡುಪಿ 15, ಗುಲ್ಬರ್ಗಾ 15, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ತಲಾ 4, ಮೈಸೂರು, ಮಂಡ್ಯಾದಲ್ಲಿ ತಲಾ 2, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ದೃಢವಾಗಿದೆ.
ರಾಜ್ಯದಲ್ಲಿ ಸೋಂಕಿತರ ಹೆಚ್ಚುತ್ತಿದ್ದರೂ ಇಂದು ಆಸ್ಪತ್ರೆಯಿಂದ 35 ಮಂದಿ ಡಿಸ್ಚಾರ್ಜ್ ಆಗಿದ್ದು ಓಟ್ಟಾರೆ ಇಲ್ಲಿಯವರೆಗೆ ೮೬೯ ಮಂದಿ ಗುಣಮುಖರಾಗಿದ್ದಾರೆ.