ಶ್ರೀನಗರ, ಮೇ 29 (DaijiworldNews/PY) : ಪುಲ್ವಾಮ ಮಾದರಿಯ ರೀತಿಯಲ್ಲೇ ಮತ್ತೊಂದು ದಾಳಿ ನಡೆಸಲು ಯತ್ನಿಸಿ ಪರಾರಿಯಾಗಿದ್ದ ಕಾರು ಮಾಲೀಕನ ಗುರುತನ್ನು ಜಮ್ಮು-ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಯನ್ನು ಸೋಪಿಯಾನ್ ನಿವಾಸಿ ಹಿದಾಯತುಲ್ಲಾ ಮಲಿಕ್ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಹಿಜ್ಬುಲ್ ಮುಜಾಹುದ್ದೀನ್ ಸಂಘಟನೆಗೆ ಸೇರಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹೀದ್ದೀನ್ ಹಾಗೂ ಜೈಷ್-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಕಾರು ಬಾಂಬ್ ಮೂಲಕ ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ದಾಳಿ ನಡೆಸಲು ಈ ಸಂಚನ್ನು ನಡೆಸಿದ್ದವು.
ಕಳೆದ ವಾರ ಉಗ್ರರ ಸಂಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಹಾಗಾಗಿ ಬುಧವಾರದಂದು ಪುಲ್ವಾಮದಲ್ಲು ಬಂದೋಬಸ್ತ್ ಕೈಗೊಂಡು ತಪಾಸಣೆಗೆ ನಾಕಾಗಳನ್ನು ಸ್ಥಾಪನೆ ಮಾಡಲಾಗಿತ್ತು. ಬುಧವಾರ ಸಂಜೆಯ ವೇಳೆ ಅನುಮಾಸ್ಪವಾಗಿ ಸಂಚರಿಸುತ್ತಿದ್ದ ಬಿಳಿ ಬಣ್ಣದ ಕಾರು ನಾಕಾ ಸಮೀಪ ಬಂದ ಸಂದರ್ಭ ಎಚ್ಚರಿಕೆ ನೀಡಿದ್ದ ಪೊಲೀಸರು ಗುಂಡು ಹಾರಿಸಿದರು. ಆ ಕೂಡಲೇ ಉಗ್ರರು ಕಾರು ತಿರುಗಿಸಿಕೊಂಡು ಪರಾರಿಯಾಗಿದ್ದರು. ಇನ್ನೊಂದು ಕಡೆ ಪೊಲೀಸರು ಎಚ್ಚರಿಕೆ ನೀಡಿ ಗುಂಡು ಹಾರಿಸಿದ್ದರು. ಆದರೆ, ಸ್ಥಳದಲ್ಲೇ ಕಾರು ಬಿಟ್ಟು ಉಗ್ರರು ನಾಪತ್ತೆಯಾಗಿದ್ದರು.
ಗುರುವಾರದಂದು ಬೆಳಗ್ಗಿನ ಜಾವ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಸಂದರ್ಭವಾಹನದಲ್ಲಿ ಅಪಾರ ಪ್ರ,ಮಾಣದ ಸುಧಾರಿತ ಸ್ಪೋಟಕಗಳು ಪತ್ತೆಯಾಗಿದ್ದವು. ಬಳಿಕ ಸ್ಪೋಟಕಗಳನ್ನು ನಿರ್ಜನ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಲಾಯಿತು.