ಕೊಳ್ಳೇಗಾಲ, ಮೇ 29 (DaijiworldNews/PY) : ನಾನು ಯಡಿಯೂರಪ್ಪ ಪರ. ಕಾಂಗ್ರೆಸ್ನಲ್ಲಿ ರಾಜೀನಾಮೆ ನೀಡಲು ಸಿದ್ದರಿರುವ 22 ಶಾಸಕರು ಇದ್ದಾರೆ. ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಮೊದಲ ಹಂತದಲ್ಲಿ ಐದು ಮಂದಿಯ ರಾಜೀನಾಮೆ ಕೊಡಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಉಮೇಶ್ ಕತ್ತಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭೆ ಸೇರಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಸರ್ಕಾರ ಇನ್ನೂ ಮೂರು ವರ್ಷ ಅಧಿಕಾರ ನಡೆಸಲಿದೆ. ಆ ನಂತರವೂ ಬಿಜೆಪಿ ಆಡಳಿತಕ್ಕೆ ಬರಲಿದೆ. ಜೀವ ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಉಮೇಶ್ ಕತ್ತಿಯವರು ನನ್ನ ಸ್ನೇಹಿತರು. ಅವರ ಮನೆಯಲ್ಲಿ ನಡೆದ ಪೂಜೆಯಲ್ಲಿ ಶಾಸಕರು ಪಾಲ್ಗೊಂಡಿದ್ದಾರೆ ಎನ್ನುವ ಮಾಹಿತಿ ನನಗೆ ದೊರೆತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಕೆಲವು ಶಾಸಕರು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಇದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲಾ ಏಳೆಂಟು ಬಾರಿ ಶಾಸಕರಾಗಿದ್ದಾರೆ. ಮುಳುಗುತ್ತಿರುವ ಕಾಂಗ್ರೆಸ್ ಅನ್ನು ಸೇರುವಷ್ಟು ಮೂರ್ಖರಲ್ಲ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನು ಮಾತ್ರ ಅಲ್ಲ, ಕೊಳ್ಳೆಗಾಲದ ಶಾಸಕ ಎನ್.ಮಹೇಶ್ ಅವರೂ ಕಾರಣೀಕರ್ತರು. ಅವರಿಗೆ 2000 ಕೋಟಿ ಕೊಟ್ಟರೂ ಕಡಿಮೆ ಎಂದರು.