ಮೈಸೂರು, ಮೇ 30 (Daijiworld News/MB) : ಲಾಕ್ಡೌನ್ ಕಾರಣದಿಂದಾಗಿ ಮುಂದೂಡಲಾಗಿರುವ ಪಿಯುಸಿ ಇಂಗ್ಲೀಷ್ ಭಾಷೆ ಪರೀಕ್ಷೆಯನ್ನು ಜೂ.18ಕ್ಕೆ ನಡೆಸಿ, ಜು.8ರ ಆಸುಪಾಸಿನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಹಾಗೆಯೇ ಎಸ್ಎಸ್ಎಲ್ಸಿ ಫಲಿತಾಂಶವನ್ನೂ ಕೂಡ ಜುಲೈ ತಿಂಗಳ ಅಂತ್ಯದಲ್ಲಿ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಡಿಡಿಪಿಐಗಳೊಂದಿಗೆ ಸಭೆ ನಡೆಸಿದ ಅವರು, ಕೆಲವರು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸದಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ ರದ್ದು ಮಾಡಿದೆ. ಹಾಗಾಗಿ ಜೂ.25ರಿಂದ ಜು.4ರವರೆಗೆ ಪರೀಕ್ಷೆ ನಡೆಯಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 24ರಿಂದ 18ಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲೇ ಶಿಕ್ಷಣ ಇಲಾಖೆಯ ಆದೇಶ ಉಲ್ಲಂಘನೆ ಮಾಡಿ ಶುಲ್ಕ ಹೆಚ್ಚಳ ಮಾಡುವ ಶಾಲೆಗಳ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೆ ಆನ್ಲೈನ್ ತರಬೇತಿ ನೀಡುವ ಕುರಿತಾಗಿ ನಿಮ್ಹಾನ್ಸ್ ನಿರ್ದೇಶಕರಿಗೆ ಪತ್ರ ಬರೆದು ಸಲಹೆ ಕೇಳಲಾಗಿದೆ ಎಂದು ಸಚಿವರು ತಿಳಿಸಿದ್ದು ಈ ಸಂದರ್ಭದಲ್ಲೇ ಗ್ರಾಮೀಣ ಭಾಗದ ಮಕ್ಕಳು ಆನ್'ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆಯೇ ಎಂದು ಮಾಧ್ಯಮ ಪ್ರಶ್ನಿಸಿದಾಗ ಈ ಕುರಿತಾಗಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.