ನವದೆಹಲಿ, ಮೇ 30 (Daijiworld News/MB) : ಕಳೆದ ಎರಡು ವಾರಗಳಲ್ಲಿ ಕರ್ನಾಟಕ ಹಾಗೂ ಬಿಹಾರದಲ್ಲಿ ಕೊರೊನಾ ಸೋಂಕು ಪ್ರಕರಣಗಳಲ್ಲಿ ತೀವ್ರ ಪ್ರಮಾಣದ ಹೆಚ್ಚಳ ಕಂಡು ಬಂದಿದ್ದು ಈ ಏರಿಕೆ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕವಾಗಿದೆ ಎಂದು ವಿಜ್ಞಾನಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಚೆನ್ನೈ ಮೂಲದ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸ್ನ ವಿಜ್ಞಾನಿ ಸೀತಾಭ್ರ ಸಿನ್ಹಾ, ಸಕ್ರಿಯ ಪ್ರಕರಣಗಳು ತಿಳಿದು ಬರಲು 10 ದಿನದಿಂದ ಎರಡು ವಾರ ಕಾಲ ಬೇಕು. ಈ ಆಧಾರದ ಮೂಲಕ ಹೇಳುವುದಾದರೆ ಬಿಹಾರದಲ್ಲಿ ಏಪ್ರಿಲ್ 24–28ರ ನಡುವೆ ಭಾರೀ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿದೆ. ಕರ್ನಾಟಕದಲ್ಲಿ ಮೇ 2–5ರ ಅವಧಿಯಲ್ಲಿ ಸೋಂಕು ಪ್ರಕರಣಗಳು ಅಧಿಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಮೇ 16 ರಿಂದ 24ರ ಅವಧಿಯಲ್ಲಿ ಕೊರೊನಾ ಸೋಂಕಿನಿ ಪ್ರಮಾಣದಲ್ಲಿ ಹೆಚ್ಚಳದ ಸರಾಸರಿ 1.62 ಇದ್ದು ಈ ಅವಧಿಯಲ್ಲೇ ಮಹಾರಾಷ್ಟ್ರದಲ್ಲಿ 1.27, ತಮಿಳುನಾಡು 1.56 ಸರಾಸರಿ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಿತ್ತು ಎಂದು ವಿವರಿಸಿದ್ದಾರೆ.
ಇನ್ನು ಕರ್ನಾಟಕ ಹಾಗೂ ಬಿಹಾರದ ನಂತರದ ಸ್ಥಾನದಲ್ಲಿ ಒಡಿಶಾ ಇದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಸಿನ್ಹಾ ಅವರು ಸಂಖ್ಯಾಶಾಸ್ತ್ರದ ಆಧಾರದಲ್ಲಿ ಅಧ್ಯಯನ ನಡೆಸಿದ್ದು ಇದನ್ನು ಇಂಡಿಯನ್ ಡಿಸೀಸ್ ಪ್ರಿಡಿಕ್ಷನ್ ಮಾಡೆಲ್'ಎಂದೂ ಕರೆಯಲಾಗುತ್ತದೆ.