ಬೆಂಗಳೂರು, ಮೇ 30 (Daijiworld News/MSP) : ರಾಜ್ಯ ಸರ್ಕಾರ ಕೊರೊನಾ ಪರೀಕ್ಷೆಯ ವಿಚಾರವಾಗಿ ಹೊಸ ಆದೇಶ ಹೊರಡಿಸಿದ್ದು ಇನ್ನು ತೀವ್ರ ಸೋಂಕುಳ್ಳ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ , ಸರ್ಕಾರದಿಂದ ಉಚಿತ ಪರೀಕ್ಷೆ ರದ್ದುಗೊಳಿಸಲಾಗಿದ್ದು, ಇನ್ನೇನಿದ್ದರೂ ಸ್ವಂತ ಖರ್ಚಿನಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹೇಳಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಕಟಣೆ ಹೊರಡಿಸಿದ್ದು , ಇಲ್ಲಿಯ ತನಕ ಸರ್ಕಾರದ ವತಿಯಿಂದ ಗಂಟಲು ದ್ರವ ಸಂಗ್ರಹಿಸಿ ಉಚಿತ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಇದೀಗ ತೀವ್ರ ಸೋಂಕುಳ್ಳ ರಾಜ್ಯಗಳಿಂದ ಬರುವ ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲೇ ಅಂದರೆ, ಪ್ರತಿಯೊಬ್ಬರೂ ಪರೀಕ್ಷೆಗೆ ರೂ.650 ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದೆ.
ವಾಹನ , ವಿಮಾನ ಮತ್ತು ರೈಲುಗಳ ಮೂಲಕ ಕರ್ನಾಟಕ್ಕೆ ಆಗಮಿಸುವ ಪ್ರಯಾಣಿಕರ ಗಂಟಲು ದ್ರವ ಸಂಗ್ರಹಿಸಿ ಪ್ರಸಕ್ತ ರಾಜ್ಯ ಸರ್ಕಾರದ ಪರೀಕ್ಷಾ ನೀತಿಯಂತೆ ಕೋವಿಡ್-19ರ ಆರ್'ಟಿ-ಪಿಸಿಆರ್ ಪರೀಕ್ಷೆ ನಡೆಸಿ 24 ಗಂಟೆಯ ಒಳಗಾಗಿ ಫಲಿತಾಂಶ ನೀಡುವ ಸಾಮರ್ಥ್ಯ ಮತ್ತು ಸನ್ನದ್ಧತೆ ಕುರಿತು ಖಾಸಗಿ ಲ್ಯಾಬ್’ಗಳೊಂದಿಗೆ ಚರ್ಚೆ ನಡೆಸಲಾಗಿರುತ್ತದೆ. ಪ್ರಯೋಗಾಲಯ ಪರೀಕ್ಷೆಗಳ ಕುರಿತು ಆರೋಗ್ಯ ಇಲಾಖೆಯ ಪ್ರಸ್ತಾವನೆಗಳನ್ನು ಸದರಿ ಖಾಸಗಿ ಪ್ರಯೋಗ ಶಾಲೆಗಳು ಸಮ್ಮತಿಸಿವೆ
ಗಂಟಲು, ರಕ್ತದ ಮಾದರಿಗಳನ್ನು ಪೊಲಿಂಗ್ ವಿಧಾನದಲ್ಲಿ ಪರೀಕ್ಷಿಸಲು ಶುಕ್ರವಾಗಿ ಪ್ರತಿ ಯಾತ್ರಿಕರಿಂದ, ಫಲಿತಾಂಶ ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಇರಲಿ ತಲಾ ರೂ.650 ಶುಲ್ಕವನ್ನು ಖಾಸಗಿ ಲ್ಯಾಬ್'ಗಳು ಪಡೆಯತಕ್ಕದ್ದು ಎಂದು ತಿಳಿಸಿದೆ.