ಭೋಪಾಲ್, ಮೇ 30 (Daijiworld News/MB) : ಸಾಮಾಜಿಕ ಜಾಲತಾಣದಲ್ಲಿ ಭೋಪಾಲ್ ಲೋಕಸಭಾ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಕಾಣೆಯಾಗಿದ್ದಾರೆ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದು, ಭೋಪಾಲ್ನ ಹಲವು ಕಡೆಗಳಲ್ಲಿ "ಕಾಣೆಯಾಗಿದ್ದಾರೆ" ಎಂಬ ಪೋಸ್ಟರ್ಗಳು, ಬ್ಯಾನರ್ಗಳು ಕಂಡು ಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ಪ್ರಗ್ಯಾ ಸಿಂಗ್ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ರಾಹುಲ್ ಕೊತಾರಿ, ಸಂಸದರು ಕ್ಯಾನ್ಸರ್ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಜನರಿಗೆ ಅಗತ್ಯವಿರುವ ನೆರವನ್ನೂ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದ ಜನರು ತತ್ತರಿಸುತ್ತಿದ್ದರೂ ಸಂಸದರು ನಾಪತ್ತೆಯಾಗಿದ್ದಾರೆ ಎಂದು ಭೋಪಾಲ್ನ ಹಲವೆಡೆಗಳಲ್ಲಿ ಅನಾಮಧೇಯ ಪೋಸ್ಟರ್ಗಳು ಹಾಕಲಾಗಿದೆ. ಈ ನಡುವೆ ಠಾಕೂರ್ ನಗರದ ಭೈರಾಗರ್ ಚಿಚ್ಲಿ ಪ್ರದೇಶದಲ್ಲಿ ಸಹಕಾರ ಭಾರತಿ ನಡೆಸುತ್ತಿರುವ ಮೊಬೈಲ್ ಆಸ್ಪತ್ರೆ ಸೇವೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಕಾರ್ಯಕರ್ತರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.