ಬೆಂಗಳೂರು, ಮೇ 30 (Daijiworld News/MSP): ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವಂತಿಲ್ಲ ಹಾಗೂ ಉಗುಳುವಂತಿಲ್ಲ ಎಂಬ ನಿಯಮವನ್ನು ಸರ್ಕಾರ ಈಗಾಗಲೇ ಹೊರಡಿಸಿದ್ದು ಅದನ್ನೀಗ ರಾಜ್ಯ ಸರ್ಕಾರ ಪರಿಷ್ಕರಿಸಿ ಈ ನಿಯಮ ಉಲ್ಲಂಘನೆ ಕಾನೂನುಬಾಹಿರ ಎಂದು ಹೇಳಲಾಗಿದೆ.
ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳಾದ ಜರ್ದಾ, ಖೈನಿ, ಪಾನ್ ಮಸಾಲ ಇತ್ಯಾದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು
ಕರ್ನಾಟಕ ಸಾಂಕ್ರಮಿಕ ರೋಗಗಳ ಅಧ್ಯಾದೇಶ 2020 ರ ಸೆಕ್ಷನ್ ಹಾಘೂ ಭಾರತೀಯ ದಂಡ ಸಂಹಿತೆ ೧೮೬೦ ಪ್ರಕಾರ, ಸಾರ್ವಜನಿಕ ಸ್ಥಳದಲ್ಲಿ ಉಗುಳುವುದರಿಂದ ಕೋವಿಡ್ 19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಇತರರಿಗೆ ಹರಡುವುದನ್ನು ತಪ್ಪಿಸಿ ಹಾಗೂ ಪರಿಣಾಮಕಾರಿಯಾಗಿ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲ ಉತ್ಪನ್ನಗಳ ಸೇವನೆ ಮತ್ತು ಉಗುಳುವುದನ್ನು ನಿಷೇಧಿಸಿದೆ . ಸಾರ್ವಜನಿಕರು ಇದನ್ನು ಉಲ್ಲಂಘಿಸಿದಲ್ಲಿ ಐ.ಪಿ.ಸಿ. ಸೆಕ್ಷನ್ ೧೮೮,೨೬೮,೨೬೯,೨೭೦ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ. ಈ ಪ್ರಕಾರ ಸಾರ್ವಜನಿಕ ಸ್ಥಳ ಮಲಿನಗೊಳಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ಅಥವಾ ಎರಡೂ ಕೂಡಾ ವಿಧಿಸಬಹುದಾಗಿದೆ.
ಈ ಕಾರಣದಿಂದ ಸಾರ್ವಜನಿಕರರು ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದು ತೀರಾ ಅತ್ಯಗತ್ಯವಾಗಿದೆ.