ಬೆಂಗಳೂರು, ಮೇ 30 (Daijiworld News/MB) : ಕೇಂದ್ರ ಸರ್ಕಾರ ಸ್ವಾಮ್ಯದ ಬೆಂಗಳೂರಿನ ಡಿಡಿ ಚಂದನ ವಾಹಿನಿಯ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸ್ಪಷ್ಟನೆ ನೀಡಿದ್ದು ಉದ್ಯೋಗಿಗಳು ಹಾಗೂ ಡಿಡಿ ಚಂದನವಾಹಿನಿಯ ಬಳಗ ಭೀತಿಗೆ ಒಳಗಾಗುವಂತಹ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.
ಡಿಡಿ ಚಂದನ ವಾಹಿನಿಯ ಒಬ್ಬರಿಗೆ ಕೊರೊನಾ ತಗುಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳಳ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ವಾಹಿನಿ, ಕೊರೊನಾ ಸೋಂಕು ದೃಢಪಟ್ಟಿರುವ ಕ್ಯಾಮರಾಮ್ಯಾನ್ ತಮಿಳುನಾಡಿನಿಂದ ಬಂದು ಮೇ 10ರಿಂದ 25ರವರೆಗೆ ಚಂದನ ವಾಹಿನಿಯಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಬಿತ್ತರಿಸಲಾಗಿದ್ದು ಅದು ತಪ್ಪು ಮಾಹಿತಿ ಸುಳ್ಳು ಸುದ್ದಿ ಎಂದು ಹೇಳಿದೆ.
ನಮ್ಮ ಸಿಬ್ಬಂದಿ ಈ ಸಂಕಷ್ಟದ ಸಂದರ್ಭದಲ್ಲೂ ತಮ್ಮ ವೈಯಕ್ತಿಕ ಅಪಾಯಗಳನ್ನು ಲೆಕ್ಕಿಸದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ದೂರದರ್ಶನದ ಕ್ಯಾಮರಾಮನ್ ಅವರು ಚಂಡೀಗಢದಲ್ಲಿ ಕೆಲಸ ಮಾಡುತ್ತಿದರು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಂದನ ವಾಹಿನಿಯಲ್ಲಿ ಕರ್ತವ್ಯ ನಿರತರಾಗಿದ್ದರು. ಮೇ 27ರಂದು ಅವರಿಗೆ ಕೊರೊನಾ ದೃಢಪಟ್ಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ. ದೂರದರ್ಶನದ ಸಂಪೂರ್ಣ ಕುಟುಂಬ ಅವರು ತ್ವರಿತವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತಿದೆ. ಈ ಕ್ಯಾಮರಾಮನ್ ಕಳೆದ ಮೇ 23ರಂದು ರಾತ್ರಿ 8 ಗಂಟೆಯಿಂದ 9.30 ಗಂಟೆವರೆಗೆ ಮಾತ್ರ ಕರ್ತವ್ಯ ನಿರ್ವಹಿಸಿದ್ದರು.