ಬೆಂಗಳೂರು, ಮೇ 30 (Daijiworld News/MSP): ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನಿಂದ ರಾಮಜನ್ಮ ಭೂಮಿ ವಿವಾದ ಇತ್ಯರ್ಥವಾಯಿತೇ ಹೊರತು ಇದರಲ್ಲಿ ಪ್ರಧಾನಿ ಮೋದಿಯವರ ಸಾಧನೆ ಎನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೋದಿ ಸರ್ಕಾರದ 2.0 ಅವಧಿಯ ಮೊದಲ ವರ್ಷ ಪೂರೈಸಿದ ಬಗ್ಗೆ ಮೋದಿ ದೇಶದ ಜನತೆಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ , ಮೋದಿಯವರು ಪತ್ರದಲ್ಲಿ 370 ನೇ ವಿಧಿ ರದ್ದು, ಅಯೋಧ್ಯೆ ವಿಷಯದಲ್ಲಿ ಜಯ ಸಿಕ್ಕಿದೆ ಎನ್ನುವುದು, ತ್ರಿವಳಿ ತಲಾಖ್ ರದ್ದು ದೇಶದ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ಕೊಟ್ಟಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ ಆದರೆ ರಾಮ ಮಂದಿರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿರುವುದು ಎನ್ನುವುದು ನೆನಪಿರಲಿ ಅದರಲ್ಲಿ ಇವರದೇನು ಸಾಧನೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆದರೆ ಮೋದಿ ಸರ್ಕಾರವೂ ಎಂದೂ ಕೂಡಾ ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಆರ್ಥಿಕ ಹಿಂಜರಿತದ ಬಗ್ಗೆ ಮೌನ ವಹಿಸಿದ್ದಾರೆ. ದೇಶದ ಜಿಡಿಪಿ ಕುಸಿತದ ಬಗ್ಗೆ ಚರ್ಚೆ ಮಾಡಲ್ಲ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶ, ನೇಪಾಳ ಶ್ರೀಲಂಕಾದಂತಹ ದೇಶಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಅವುಗಳಿಗಿಂತಲೂ ಕಡಿಮೆ ಇದ್ದು ಕಳೆದ 11 ವರ್ಷದಲ್ಲಿಯೇ ಅತಿ ಕೆಳಮಟ್ಟಕ್ಕೆ ಇಳಿದಿದೆ. ಕೋವಿಡ್ ಪರಿಹಾರ ರೂಪದಲ್ಲೂ ಕೇಂದ್ರ ಸರ್ಕಾರ ಜಿಡಿಪಿಯ ಶೇ 1 ರಷ್ಟು ಮಾತ್ರ ಪರಿಹಾರ ಘೋಷಣೆ ಮಾಡಿ ಎಲ್ಲರನ್ನೂ ಕಷ್ಟಕ್ಕೆ ನೂಕಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.