ಬೆಂಗಳೂರು, ಮೇ 30 (Daijiworld News/MB) : ಉಮೇಶ್ ಕತ್ತಿಯವರೊಬ್ಬರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿರುಗೇಟು ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅತೃಪ್ತರು ಬಿಜೆಪಿಗೆ ಬರದಿದ್ದರೆ ಸರ್ಕಾರ ರಚನೆ ಮಾಡಲು ಸಾಧ್ಯವಾಗುತ್ತಿತ್ತಾ? ಯಾರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಅವರು ಸ್ವಲ್ಪ ತಾಳ್ಮೆಯಿಂದ ಇರಬೇಕು. ಉಮೇಶ್ ಕತ್ತಿಯವರೊಬ್ಬರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ಅವರು ಸರ್ಕಾರವನ್ನು ಕೆಡವುವ ಪ್ರಯತ್ನ ಯಾಕೆ ಮಾಡಬೇಕು. ಹೇಗೆ ನಿಮ್ಮ ಬಾಯಿಯಿಂದ ಸರ್ಕಾರ ಕೆಡವುವಂತಹ ಮಾತುಗಳು ಬಂದಿದೆ. ನಾವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಅವರ ಸರ್ಕಾರವನ್ನು ಉಳಿಸಬೇಕು. ಅಸ್ಥಿರತೆ ತರುವ ಮಾತು ನಾವು ಆಡಬಾರದು ಎಂದು ಉಮೇಶ್ ಕತ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಉಮೇಶ್ ಕತ್ತಿಯವರು ಸರ್ಕಾರ ಕೆಡವಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಕತ್ತಿಯವರು ಕನಸು ಕಾಣಬೇಕಷ್ಟೇ. ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾರಿಗೆ ನಿಜವಾಗಿ ಅಸಮಾಧಾನ ಇರುವುದು ಎಂದು ಅವರೇ ಹೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಕತ್ತಿಯವರು ಕೇಂದ್ರದ ನಾಯಕರನ್ನು ಭೇಟಿ ಮಾಡಿದ್ದು ಕೇಂದ್ರದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕತ್ತಿಯವರಿಗೆ ಮುಖ್ಯಮಂತ್ರಿಯಾಗುವ ಆಸೆ ಇರಬಹುದು. ಅವರು ಮುಖ್ಯಮಂತ್ರಿಯಾದರೆ ನಮಗೂ ಸಂತೋಷವೇ. ಆದರೆ ಸ್ವಲ್ಪ ತಾಳ್ಮೆಯಿಂದ ಇರಬೇಕು. ಆದರೆ ಅವರು ಯಾಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹಾಗೆಯೇ ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ವಾಗ್ದಾಳಿ ನಡೆಸಿ, ಮೊದಲು ಅವರು ಯಾರ ಆಶೀರ್ವಾದದಿಂದ ಹೇಗೆ ಈ ಸ್ಥಾನ ಪಡೆದಿದ್ದಾರೆ ಎಂದು ತಿಳಿಯಲಿ. ಸಚಿವ ಸ್ಥಾನ ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದಕ್ಕೆ ಕಾಯುವುದು ಅತೀ ಮುಖ್ಯ. ಮೊದಲಾಗಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹೇಗೆ ಬಂದಿದೆ ಎಂದು ಅವರು ಅರ್ಥ ಮಾಡಿಕೊಳ್ಳಬೇಕು. ಹೊರಗಿನಿಂದ ಕೆಲವು ಶಾಸಕರು ಬಂದ ಕಾರಣದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂಬುವುದು ಅವರು ನೆನಪಲ್ಲಿ ಇಟ್ಟುಕೊಳ್ಳಬೇಕು ಎಂದು ಹರಿಹಾಯ್ದರು.
ಇನ್ನು ಈ ಸಂದರ್ಭದಲ್ಲೇ ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಯಶಸ್ವಿಯಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.