ನವದೆಹಲಿ, ಮೇ 30 (Daijiworld News/MB) : ಭಾನುವಾರಕ್ಕೆ ಕೊರೊನಾ ಲಾಕ್ಡೌನ್ 4.0 ಕೊನೆಯಾಗಲಿದ್ದು ಜೂನ್ ಒಂದರಿಂದ 5ನೇ ಹಂತದ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆಯಿದ್ದು ಈ ವೇಳೆ ಕೇಂದ್ರ ಸರ್ಕಾರ ಲಾಕ್ಡೌನ್ ನಿಯಮದಲ್ಲಿ ಮತ್ತಷ್ಟು ಸಡಿಲಿಕೆ ಮಾಡಿ ಪ್ರವಾಸೋದ್ಯಮ ಮತ್ತು ಹೋಟೆಲ್ಗಳಿಗೆ ವಿನಾಯಿತಿ ನೀಡುವ ಸಾಧ್ಯತೆಯಿದೆ.
ಪುದುಚೇರಿ, ಕೇರಳ, ಗೋವಾ, ಮತ್ತು ಈಶಾನ್ಯ ರಾಜ್ಯಗಳ ಆರ್ಥಿಕತೆಯು ಹೆಚ್ಚಾಗಿ ಪ್ರವಾಸೋದ್ಯಮದ ಮೇಲೆಯೇ ಅವಲಂಭಿಸಿದ್ದು ಈ ನಿಟ್ಟಿನಲ್ಲಿ ಜೂನ್ 1ರಿಂದ ಐದನೇ ಹಂತದ ಲಾಕ್ಡೌನ್ ಜಾರಿಗೆ ಬಂದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೂ ಅನುಮತಿ ನೀಡುವಂತೆ ಹಲವು ರಾಜ್ಯಗಳು ಕೇಂದ್ರಕ್ಕೆ ಮನವಿ ಮಾಡಿತ್ತು. ಹಾಗೆಯೇ ಕೆಲವೊಂದು ಸಲಹೆಗಳನ್ನು ನೀಡಿದ್ದು ಕೇಂದ್ರ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು ಹಲವು ರಾಜ್ಯಗಳ ಆರ್ಥಿಕ ಚೇತರಿಕೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹಲವು ರಾಜ್ಯಗಳು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವನ್ನೇ ಅವಲಂಬಿಸಿದ್ದು ಈ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೈ ವಿನಾಯಿತಿ ನೀಡುವಂತೆ ರಾಜ್ಯಗಳು ಕೋರಿದ್ದು ಹೋಟೆಲ್, ಪ್ರವಾಸಿ ಕ್ಷೇತ್ರಗಳಲ್ಲಿ ಕನಿಷ್ಠ ಆಸನಗಳು, ಗ್ರಾಹಕರ ಆರೋಗ್ಯ ತಪಾಸಣೆ, ಅರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸುವ ಮೂಲಕ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ಕೇಂದ್ರಕ್ಕೆ ಸಲಹೆ ನೀಡಿವೆ. ಈ ಕಾರಣದಿಂದಾಗಿ ಈ ಕ್ಷೇತ್ರಕ್ಕೂ ಐದನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ವಿನಾಯಿತಿ ನೀಡುವ ಸಾಧ್ಯತೆಯಿದೆ. ಎಂದು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಾಗೆಯೇ ಈ ಕುರಿತಾಗಿ ಸರ್ಕಾರ ಚರ್ಚೆ ನಡೆಸುತ್ತಿದ್ದು ಇನ್ನು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.